ಮುಧೋಳದ ಡಾ.ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿ.ವಿ.ಅರಕೇರಿ, ಎಸ್.ಡಿ.ಬಿಳ್ಳೂರ, ಎಂ.ವಿ.ದಾಸರಡ್ಡಿ ಇತರರಿದ್ದರು. 
ಬಾಗಲಕೋಟೆ

ಸತ್ಕಾರ್ಯಕ್ಕೆ ಸಂಪತ್ತು ಬಳಸಿದರೆ ಜೀವನದಲ್ಲಿ ನೆಮ್ಮದಿ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ ಹೇಳಿಕೆ
  • ಗುರುವಂದನೆ-ಸ್ನೇಹ ಸಂಗಮ ಕಾರ್ಯಕ್ರಮ
  • ಇಂದಿನ ಸಮಾಜದಲ್ಲಿ ಹಣ-ಆಸ್ತಿಗಿಂತ ಮೌಲ್ಯಯುತ ಬದುಕು ಮುಖ್ಯವಾಗಿದೆ.
ಮುಧೋಳ: ಜ್ಞಾನ ಸಂಪಾದನೆಯ ಮೂಲಕ ಉನ್ನತ ಸ್ಥಾನಕ್ಕೇರಿ ಗಳಿಸಿದ ಸಂಪತ್ತನ್ನು ಸತ್ಕಾರ್ಯಗಳಿಗೆ ಹಾಗೂ ಸಮಾಜದ ಹಿತಕ್ಕಾಗಿ ಬಳಸಿದಾಗ ಮಾತ್ರ ಜೀವನದಲ್ಲಿ ನಿಜವಾದ ನೆಮ್ಮದಿ ಮತ್ತು ಸಂತೋಷ ಕಾಣಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ ಹೇಳಿದರು.
ನಗರದ ಡಾ. ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ 1977-78ನೇ ಸಾಲಿನ ಎಸ್ಸೆಸ್ಸೆಲ್ಸಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಂಗಮ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಎಸ್.ಡಿ.ಬಿಳ್ಳೂರ ಮಾತನಾಡಿ, ಇಂದಿನ ಸಮಾಜದಲ್ಲಿ ಹಣ-ಆಸ್ತಿಗಿಂತ ಮೌಲ್ಯಯುತ ಬದುಕು ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಮುಂದೆ ಸಂಸ್ಕಾರವಂತರಾಗಿ ಬದುಕುವ ಮೂಲಕ ಅವರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕ ಎಂ.ವಿ. ದಾಸರಡ್ಡಿ ಮಾತನಾಡಿ, ಇಂತಹ ಸ್ನೇಹ ಮಿಲನ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸೈನಿಕರಾದ ಮಹಬೂಬ ಸಾರವಾಡ, ಕುಮಾರ ನಾಡಗೌಡ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಎಸ್.ಎಸ್. ಉಕ್ಕಲಿ, ಎನ್.ಪಿ. ಹುಲಕುಂದ, ಎಸ್.ಬಿ.ಉಳ್ಳಾಗಡ್ಡಿ ಸೇರಿ ಉಪಸ್ಥಿತರಿದ್ದರು. ಮಹಾದೇವಿ ರಾಮತೀರ್ಥ ಸ್ವಾಗತಿಸಿದರು. ಎ.ಎಚ್.ಬರಗಿ ಹಾಗೂ ಎಂ.ಆರ್.ಬಿದರಿ ನಿರೂಪಿಸಿದರು. ಭೀಮು ಘೋರ್ಪಡೆ ವಂದಿಸಿದರು.