ಬಾಗಲಕೋಟೆ ಸಮೀಪದ ಗದ್ದನಕೇರಿ ಬಳಿ ಬಿವಿವಿ ಸಂಘದ ಪ್ರಕೃತಿ ಯೋಗವನ ಆವರಣವನ್ನು ಮಂಗಳವಾರ ಮುದ್ದೇನಹಳ್ಳಿ ಸತ್ಯಸಾಯಿ ವಿಶ್ವವಿದ್ಯಾಲಯದ ಸಂಸ್ಥಾಪಕ ಸದ್ಗುರು ಮದುಸೂಧನಸಾಯಿ ಉದ್ಘಾಟಿಸಿದರು. ಸಂಸದ ಗೋವಿಂದ ಕಾರಜೋಳ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮತ್ತಿತರರಿದ್ದರು.  
ಬಾಗಲಕೋಟೆ

ವಿದ್ಯಾಲಯಗಳು ಕಡಿಮೆಯಾದರೆ ಸಮಾಜಕ್ಕೆ ನಷ್ಟ

ಪ್ರಮುಖ ಮುಖ್ಯಾಂಶಗಳು

  • ಬಿವಿವಿ ಸಂಘದ ಪ್ರಕೃತಿ ಯೋಗವನ ಆವರಣದ ಉದ್ಘಾಟನೆ
  • ವಸುದೈವ ಕುಟುಂಬಕಂ ಭಾರತೀಯ ಪರಂಪರೆಯ ಮೂಲ ಮೌಲ್ಯ
  • ಸದ್ಗರು ಮಧುಸೂಧನಸಾಯಿ ಸಲಹೆ
ಬಾಗಲಕೋಟೆ: ದೇವಾಲಯಗಳು ಕಡಿಮೆ ಮಾಡಿದರೆ ಅದರಿಂದ ದೇವರಿಗೆ ನಷ್ಟ. ಅದೇ ವಿದ್ಯಾಲಯಗಳು ಕಡಿಮೆ ಮಾಡಿದರೆ ಅದರಿಂದ ಸಮಾಜಕ್ಕೆ ನಷ್ಟವಾಗುತ್ತದೆ ಎಂದು ಮುದ್ದೇನಹಳ್ಳಿ ಸತ್ಯಸಾಯಿ ವಿಶ್ವವಿದ್ಯಾಲಯದ ಸಂಸ್ಥಾಪಕ ಸದ್ಗುರು ಮದುಸೂಧನಸಾಯಿ ಸಲಹೆ ನೀಡಿದರು.
ನಗರ ಸಮೀಪದ ಗದ್ದನಕೇರಿ ಬಳಿ ಬಿವಿವಿಎಸ್ ಪ್ರಕೃತಿ ಯೋಗವನ ಆವರಣವನ್ನು ಮಂಗಳವಾರ ಉದ್ಘಾಟಿಸಿ, ಬಳಿಕ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
\
ಪ್ರಕೃತಿಯನ್ನು ಯೋಗದಿಂದ ಸುಕೃತವಾಗಿ ಮಾಡಬಹುದು. ಭೋಗದಿಂದ ವಿಕೃತಿಯೂ ಮಾಡಬಹುದು. ಪ್ರಾಣಾಪಾಯ ಮಾಡಿದರೆ ಮಾತ್ರ ಯೋಗವಲ್ಲ. ಉತ್ತಮ ಆಹಾರ ಸೇವನೆ, ಆಧ್ಯಾತ್ಮ ಕಾಯಕ ಮಾಡಿದರೆ ಯೋಗ ಇತಿ-ಮಿತಿಯೊಳಗಿದ್ದರೆ ಎಲ್ಲರಿಗೂ ಉತ್ತಮ ಎಂದು ಕಿವಿಮಾತು ಹೇಳಿದರು.
ವಸುದೈವ ಕುಟುಂಬಕಂ ಎನ್ನುವುದು ಭಾರತೀಯ ಪರಂಪರೆಯ ಮೂಲ ಮೌಲ್ಯವಾಗಿದೆ. ಇಂತಹ ಮೌಲ್ಯಯುಕ್ತ ಶಿಕ್ಷಣ ನೀಡುತ್ತಿರುವ ಬಿವಿವಿ ಸಂಘದ ಕಾರ್ಯ ಶ್ಲಾಘನೀಯ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ ಪರಿಣಾಮ ಈ ಎತ್ತರಕ್ಕೆ ಸಂಘ ಬೆಳೆದು ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇವತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ವ್ಯವಹಾರವಾಗಿವೆ. ಹೆಚ್ಚು ಲಾಭ ನೀಡುವ ಕ್ಷೇತ್ರಗಳೆಂದು ಇಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಲಾಗುತ್ತಿದೆ. ವೈದ್ಯ ನಾರಾಯಣ ಹರಿ ಎನ್ನುವ ವೈದ್ಯರೇ ಸುಲಿಗೆಗೆ ನಿಂತರೆ ದೇಶದ ಭವಿಷ್ಯವೇನು? ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರ ಒಳಿತಿಗಾಗಿ ಎಲ್ಲರೂ ಪ್ರಕೃತಿದತ್ತವಾಗಿ ತಮ್ಮ ಕಾರ್ಯ ಮಾಡುತ್ತಾ ಸಾಗಬೇಕಿದೆ. ವಸುದೈವ ಕುಟುಂಬಕಂ ಎಂಬುವುದು ಭಾರತದಲ್ಲಿ ಮಾತ್ರ ನಾವು ಕಾಣಬಹುದಾಗಿದೆ. ಭಾರತದಲ್ಲಿ ಮಾತ್ರ ಭಾವನಾತ್ಮಕ ಸಂಬಂಧಗಳು ಇವೆ. ಈ ತತ್ವವು ಸಂಕುಚಿತ ಮನೋಭಾವವನ್ನು ತೊರೆದು, ವಿಶಾಲ ಹೃದಯದಿಂದ ಇಡೀ ಜಗತ್ತೆ ತನ್ನವರೆಂದು ಭಾವಿಸುವುದನ್ನು ಕಲಿಸುತ್ತದೆ. ಇದು ಭಾರತೀಯ ಪರಂಪರೆಯ ಮೂಲಭೂತ ಮೌಲ್ಯವಾಗಿದೆ ಎಂದರು.
ಶ್ರೀ ಸತ್ಯಸಾಯಿ ಸೇವಾ ಗುರುಕುಲದ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸ್ವಂತ ಆಸ್ತಿ ಉದ್ಯಮ ಬೆಳೆಸುವುದಕ್ಕೆ ಲಕ್ಷಾಂತರ ಜನರಿದ್ದಾರೆ. ಆದರೆ, ಸಮಾಜಕ್ಕೆ ಆಸ್ತಿ ಮಾಡುವವರ ಸಂಖ್ಯೆ ವಿರಳ. ಇಲ್ಲಿ ವೀರಣ್ಣ ಚರಂತಿಮಠ ಅವರು ಪ್ರಮಾಣಿಕವಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ಬಿವಿವಿಎಸ್ ಬೃಹತ್ ಶಿಕ್ಷಣ ಸೇವಾ ಸಂಸ್ಥೆ ಅಡಿಯಲ್ಲಿ 54 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ತಮ್ಮ ಕುಟುಂಬದವರನ್ನು ದೂರ ಇಟ್ಟು ಪ್ರಾಮಾಣಿಕವಾಗಿ ಸಂಘ ಬೆಳೆಸುವ ಕಾರ್ಯವನ್ನು ವೀರಣ್ಣ ಚರಂತಿಮಠ ಮಾಡಿದ್ದಾರೆ. ಬಿವಿವಿ ಸಂಘ ದೇಶದ ಯಾವುದೇ ಸಂಸ್ಥೆಗಳಿಗಿಂತ ಹಿಂದಿಲ್ಲ. ಚರಂತಿಮಠರ ಪ್ರಗತಿಪರ ಆಲೋಚನೆಗಳಿಂದ ದೇಶದಲ್ಲಿರುವ ಎಲ್ಲ ಕೋರ್ಸಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ದೊರಕಿಸಬೇಕು ಎಂದು ಹೇಳಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಹಾಂತೇಶ ಶೆಟ್ಟರ, ಮಲ್ಲಿಕಾರ್ಜುನ ಸಾಸನೂರ, ಅಶೋಕ ಸಜ್ಜನ, ಗುರುಬಸವ ಸೂಳಿಬಾವಿ ಮತ್ತಿತರರಿದ್ದರು.