ಬಾಗಲಕೋಟೆ ಜಿಪಂ ಸಭಾಭವನದಲ್ಲಿ ವಿಪತ್ತು ನಿರ್ವಹಣೆ ಸಭೆಯಲ್ಲಿ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೃಷಿ ಬೆಳೆಗಳ ವಿಮೆ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಶಾಸಕರಾದ ಆರ್.ಬಿ. ತಿಮ್ಮಾಪೂರ, ಜೆ.ಟಿ. ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.
- ತುರ್ತಾಗಿರುವ 5-6 ಗೇಟ್‌ಗೆ ಮೊದಲ ಆದ್ಯತೆ
- ಸಚಿವ ಎಂ.ಬಿ. ಪಾಟೀಲ ಹೇಳಿಕೆ
ಬಾಗಲಕೋಟೆ: ತುಂಗಭದ್ರ ಜಲಾಶಯದ ಮಾದರಿಯಲ್ಲಿ ಜಿಲ್ಲೆಯ ಹಿಪ್ಪರಗಿ ಜಲಾಶಯದ ಎಲ್ಲ 22 ಗೇಟ್‌ಗಳನ್ನು ದುರಸ್ತಿ ಮಾಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಈ ಬಗ್ಗೆ ನಾನು ಸಿಎಂ ಮತ್ತು ಇಲಾಖೆ ಸಚಿವರ ಜೊತೆ ಮಾತನಾಡುವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಿ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಜಲಾಶಯಗಳಲ್ಲಿ ನೀರಿನ ಸ್ಥಿತಿ-ಗತಿ ಬಗ್ಗೆ ಪರಿಶೀಲಿಸುವ ವೇಳೆ ಗಮನ ಸೆಳೆದ ತೇರದಾಳ ಶಾಸಕ ಸಿದ್ದು ಸವದಿ ಅವರ ವಿಷಯ ಪ್ರಸ್ತಾಪಕ್ಕೆ ಉತ್ತರಿಸಿದರು.
ಹಿಪ್ಪರಗಿ ಜಲಾಶಯ ಕಳೆದ ಸಲ ಒಂದು ಗೇಟ್ ತುಂಡಾಗಿದ್ದರಿಂದ 1.5 ಟಿಎಂಸಿ ನೀರು ಪೋಲಾಗಿತ್ತು. ಸದ್ಯ ಗೇಟ್‌ಗಳ ಪರಿಸ್ಥಿತಿ ಹೇಗಿದೆ ಎಂದು ಸಚಿವರು ಪ್ರಶ್ನಿಸಿದರು.
ಆಗ ಶಾಸಕ ಸವದಿ ಅವರು, ಜಲಾಶಯದ ಎಲ್ಲ ಗೇಟುಗಳನ್ನು ದುರಸ್ತಿ ಮಾಡಿಸುವುದು ಅಗತ್ಯ ಇದೆ ಎಂದು ಹೇಳಿದರು. ಆಗ ಜಲಾಶಯದ ಅಧಿಕಾರಿ, ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಎಂಡಿ ಕಚೇರಿಯಲ್ಲಿ ಇದೆ ಎಂದರು.
ಅಂದಾಜು ಖರ್ಚು ಎಷ್ಟು ಬರುತ್ತದೆ ? ಯಾರು ಈ ಬಗ್ಗೆ ಪರಿಶೀಲಿಸಿದ್ದಾರೆ ? ತುರ್ತು ಎಷ್ಟು ಗೇಟ್‌ಗಳು ಅಪಾಯ ಸ್ಥಿತಿಯಲ್ಲಿವೆ? ಎಂದು ಕೇಳಿದರು.
ಆಗ ಜಲಾಶಯದ ಅಧಿಕಾರಿ, ಹೈದ್ರಾಬಾದ್ ಕಂಪನಿ ವರದಿ ನೀಡಿದೆ. ಬಳಿಕ ತುಂಗಭದ್ರ ಜಲಾಶಯ ಕನ್ಹಯ ನಾಯ್ಡು ಅವರು ಬಂದು ಪರಿಶೀಲಿಸಿದ್ದಾರೆ. ಈ ಬಗ್ಗೆ ಅಲ್ಟಸೋನಿಕ್ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಂದಾಜು 40 ಕೋಟಿ ರೂ. ವೆಚ್ಚ ಬರುತ್ತದೆ ಎಂದು ಸಭೆಗೆ ತಿಳಿಸಿದರು.
ಜಲಾಶಯ ಮತ್ತು ಗೇಟುಗಳಿಗೆ ಆಯುಷ್ಯ ಇರುತ್ತದೆ. ಕಾಲಕಾಲಕ್ಕೆ ದುರಸ್ತಿ ಮಾಡಿಸಬೇಕು. ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ, ಗಲಗಲಿ ಬ್ಯಾರೇಜ್ ನೀರು ಸಂಗ್ರಹ ಅಗತ್ಯವಾಗಿದೆ. ಹೀಗಾಗಿ ಮೊದಲು ಅಪಾಯ ಸ್ಥಿತಿಯಲ್ಲಿ ಇರುವ 5-6ಗೇಟುಗಳ ದುರಸ್ತಿಯನ್ನು ಮೊದಲ ಹಂತದಲ್ಲಿ ತೆಗೆದುಕೊಂಡು ಬಳಿಕ ಉಳಿದ ಗೇಟುಗಳ ದುರಸ್ತಿ ಮಾಡಿಸಲು ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.
ಮೊಬೈಲ್ ಸ್ವೀಕರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಸಭೆಯಲ್ಲಿ ಬೀಳಗಿ ಶಾಸಕ ಜೆ.ಟಿ. ಪಾಟೀಲ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಅನೇಕ ಅಽಕಾರಿಗಳು ನಮ್ಮ ಫೋನ್ ಸ್ವೀಕರಿಸಲ್ಲ. ಕೆಲವರು ನೀವು ಯಾರು? ಎಂದು ಕೇಳುತ್ತಾರೆ. ಮೊದಲು ಜನಪ್ರತಿನಿಧಿಗಳ ನಂಬರ್ ಸೇವ್ ಮಾಡಿಕೊಳ್ಳಲಿ ಎಂದು ಸಚಿವರ ಗಮನಕ್ಕೆ ತಂದರು.
ಅಧಿಕಾರಿಗಳ ಈ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ಸಚಿವ ಎಂ.ಬಿ. ಪಾಟೀಲ, ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಮಾತ್ರವಲ್ಲದೇ ಸಾರ್ವಜನಿಕರ ಫೋನ್ ಗಳನ್ನು ಸಹ ಸ್ವೀಕರಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಒಂದು ಕಂಟೋಲ್ ರೂಮ್ ತೆರೆಯಿರಿ. ಅಲ್ಲಿಂದ ಅಧಿಕಾರಿಗಳಿಗೆ ಫೋನ್ ಮಾಡಿಸಿ, ಯಾರು ಸ್ವೀಕರಿಸಲ್ಲ ಅವರ ಹೆಸರು ಪಟ್ಟಿಮಾಡಿ ಕೊಡಿ. ಸಭೆಗಳಲ್ಲಿ, ತುರ್ತು ಕೆಲಸದಲ್ಲಿ ಇದ್ದರೆ, ನಂತರವಾದರೂ ಅವರಿಗೆ ಫೋನ್ ನ್ ಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಅಂತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.