ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ಪ್ರಾಂತ ಕಾರ್ಯಕಾರಣಿ ಸದಸ್ಯ ಗೋಪಾಲಜೀ ಮಾತನಾಡಿದರು. ಕಾಡಸಿದ್ಧೇಶ್ವರ ಶ್ರೀಗಳು, ಕೊಟೆಕಲ್ ಹೊಳೆಹುಚ್ಚೇಶ್ವರ ಶ್ರೀಗಳು ಇತರರಿದ್ದರು. 
ಬಾಗಲಕೋಟೆ

ಹಿಂದೂ ಸಮಾಜ ಒಗ್ಗೂಡಿಸಬೇಕಿದೆ

ಪ್ರಮುಖ ಮುಖ್ಯಾಂಶಗಳು

  • ಗೋಪಿಜೀ ಅಭಿಮತ
  • ಸಂಸ್ಕೃತಿ, ಸಂಪ್ರದಾಯ ಕಾಪಾಡಿ
  • ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು
ಗುಳೇದಗುಡ್ಡ: ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ಪ್ರಾಂತ ಕಾರ್ಯಕಾರಣಿ ಸದಸ್ಯ ಗೋಪಿಜೀ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಹಿಂದೂ ಧರ್ಮವು ಕೇವಲ ಒಂದು ಮತವಲ್ಲ. ಅದು ಜೀವನ ಪದ್ಧತಿಯಾಗಿದೆ. ನಮ್ಮ ಪೂರ್ವಜರು ಅನುಸರಿಸಿದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿಂದೂ ಸಮಾಜ ಸಂಘಟಿತಗೊಂಡರೆ ಯಾವುದೇ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಡಸಿದ್ಧೇಶ್ವರ ಶ್ರೀಗಳು ಮಾತನಾಡಿ, ಹಿಂದಿನ ದಿನಗಳಲ್ಲಿ ಧಾರ್ಮಿಕ ಮೌಲ್ಯಗಳೊಂದಿಗೆ ನಡೆಯುತ್ತಿದ್ದ ಹಬ್ಬಗಳು ಇತ್ತೀಚಿನ ದಿನಗಳಲ್ಲಿ ಮೋಜು-ಮಸ್ತಿಗೆ ಸೀಮಿತವಾಗುತ್ತಿರುವುದು ವಿಷಾದನೀಯವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕೊಟೆಕಲ್ ಹೊಳೆಹುಚ್ಚೇಶ್ವರ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯದೇ ಪಾಲಿಸುವುದು ಅಗತ್ಯವಾಗಿದೆ. ದೇಶದಲ್ಲಿ ಸಂಪತ್ತಿನ ಕೊರತೆ ಇಲ್ಲ, ಆದರೆ ಇಚ್ಛಾಶಕ್ತಿಯ ಕೊರತೆ ಇದೆ. ದೃಢ ಸಂಕಲ್ಪ ಇದ್ದರೆ ಯಾವುದೇ ಕಾರ್ಯ ಅಸಾಧ್ಯವಲ್ಲ ಎಂದು ಅಭಿಪ್ರಾಯಪಟ್ಟರು.
ಗುರುಸಿದ್ಧೇಶ್ವರ ಬ್ರಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಹಿಂದೂ ಸಮ್ಮೇಳನ ಸಂಚಲನ ಸಮಿತಿಯ ಅಧ್ಯಕ್ಷ ಅಶೋಕ ಹೆಗಡೆ, ಸಂಪತಕುಮಾರ್ ರಾಠಿ, ರಂಗಪ್ಪ ಶೇಬಿನಕಟ್ಟಿ, ಪಿ.ಎನ್.ಪವಾರ, ಸಂಜಯ್ ಕಾರಕೂನ, ಮಧುಸೂಧನ ರಾಂದಡ, ಮುರುಗೇಶ ರಾಜನಾಳ,ಈರಣ್ಣ ಹಳ್ಳಿ, ಸಂತೋಷ ನಾಯನೇಗಲಿ, ವಿಠ್ಠಲ ಪತ್ತಾರ, ಮಲ್ಲಿಕಾರ್ಜುನ ಶೀಲವಂತ, ಪ್ರಭು ತಟ್ಟಿ ಮಠ, ರವಿ ಶೇಬಿನಕಟ್ಟಿ, ಅಮಾತೆಪ್ಪ ಕೊಪ್ಪಳ,ಬಸವರಾಜ ಕುಂಬಾರ, ಈರಣ್ಣ ಬಂಡಿವಡ್ಡರ, ಪ್ರಶಾಂತ ಜವಳಿಸೇರಿ ಹಲವರು ಉಪಸ್ಥಿತರಿದ್ದರು. ಕಂಠಿಗೌಡ್ರ ನಿರೂಪಿಸಿದರು. ಈರಣ್ಣ ಶೇಖಾ ವಂದಿಸಿದರು.