ಬಾಗಲಕೋಟೆ ನಗರದ ಕಲಾಭವನದಲ್ಲಿ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಹಾಗೂ ರಡ್ಡಿ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತಿ ಕಾರ್ಯಕ್ರಮವನ್ನು ಮಾಜಿ ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಉದ್ಘಾಟಿಸಿದರು. ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಪ್ರದೀಪ ಗುರೂಜಿ, ಸಂಸದ ಪಿ.ಸಿ.ಗದ್ಧಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಮಹೇಶ ಕಕರೆಡ್ಡಿ ಸೇರಿ ಇತರರಿದ್ದರು.  
ಬಾಗಲಕೋಟೆ

ಹೇಮರಡ್ಡಿ ಮಲ್ಲಮ್ಮ ಪ್ರೀತಿ, ತ್ಯಾಗದ ಸಂಕೇತ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕಿ ಸೌಮ್ಯ ರೆಡ್ಡಿ ಹೇಳಿಕೆ
  • 604ನೇ ಜಯಂತಿ ಕಾರ್ಯಕ್ರಮ
ಬಾಗಲಕೋಟೆ: ಮಹಿಳಾ ಕುಲಕ್ಕೆ ‌ ಸ್ಫೂರ್ತಿಯಾಗಿರುವ ಹೇಮರಡ್ಡಿ ಮಲ್ಲಮ್ಮ ಪ್ರೀತಿ, ತ್ಯಾಗ, ಸಹನೆಯ ಸಂಕೇತ ಎಂದು ಮಾಜಿ ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.
ನಗರದ ಕಲಾಭವನದಲ್ಲಿ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಹಾಗೂ ರಡ್ಡಿ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಲ್ಲಮ್ಮ ಸದ್ಗುಣಿಯಾಗಿ ಆದರ್ಶದ ಬದುಕು ಬಾಳಿ ದೇವತೆಯ ಸ್ಥಾನ ಪಡೆದು ಪೂಜಿತಗೊಳ್ಳುವ ಮೂಲಕ ಮಹಿಳಾ ಕುಲಕ್ಕೆ ಸೂರ್ತಿಯಾಗಿದ್ದಾಳೆ. ಮಲ್ಲಮ್ಮನ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯತೆಯಿದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಆದರ್ಶಮಯ ಬದುಕು ಜೀವನದ ಸಾರ್ಥಕತೆಗೆ ಪ್ರೇರಣೆಯಾಗಿದೆ. ಮಹಾತ್ಮರು, ಶರಣರ ಜಯಂತಿ ಆಚರಣೆಗಳು ಮನುಕುಲದ ಬದುಕಿಗೆ ಪೂರಕವಾಗಿ ನಡೆಯುತ್ತವೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಜಂಟಿಯಾಗಿ ಮಾತನಾಡಿ,ಭಕ್ತಿ, ಪ್ರೀತಿ, ಸಹಕಾರದ ಸಾಕಾರ ಮೂರ್ತಿ ಎನಿಸಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಕುಲದ ದಿಕ್ಸೂಚಿ ಆಗಿದ್ದಾರೆ ಎಂದು ಹೇಳಿದರು.
ಸದ್ಬೊಧನೆ ನೀಡಿದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ಹೇಮರಡ್ಡಿ ಮಲ್ಲಮ್ಮ ಮನುಕುಲವನ್ನು ಆದರ್ಶದ ಬೆಳಕಿನೆಡೆಗೆ ಕೊಂಡೊಯ್ಯದ ಮಹಾನ್ ಶರಣೆ ಎಂದರು.
ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬೀಳಗಿಯ ಎಂ.ಎನ್.ಪಾಟೀಲ ಮಾತನಾಡಿದರು. ಆರ್.ಎಲ್.ಕಟಗೇರಿ, ಮಲ್ಲಿಕಾರ್ಜುನ ಮೆಳ್ಳಿಗೇರಿ, ಡಿ.ಎಂ.ಪೈಲ್, ಚಂದ್ರಶೇಖರ ಕಾಮಾ, ರಾಮನಗೌಡ ಜಕ್ಕನಗೌಡ್ರ, ಪಂಡಿತ ಮಾಚಾ, ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿ ವೇಮನ ವಚನ ಸುಧೆ ಪ್ರಸ್ತುತಪಡಿಸಿದರು. ಎಸ್.ಟಿ.ಬೆಳಕೊಪ್ಪದ ಸ್ವಾಗತಿಸಿದರು. ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಮಹೇಶ ಕಕರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸೋನಾ ಕಟಗೇರಿ ಮತ್ತು ಪಾಂಡು ಕಟಗೇರಿ ನಿರೂಪಿಸಿದರು. ನಕುಲ ಬೆಳ್ಳುಬ್ಬಿ ವಂದಿಸಿದರು.
ಕಾರ್ಯಕ್ರಮದ ನಂತರ ಗದಗ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ಕಲಾವಿದರಿಂದ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಗಮನ ಸೆಳೆಯಿತು. ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ ಮೆಚ್ಚುಗೆ ವ್ಯಕ್ತವಾಯಿತು.