ಬಾಗಲಕೋಟೆ ತಾಲೂಕಿನ ಹಳೇ ಮುರನಾಳ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಬೃಹತ್ ಮರವೊಂದ ಬುಡಸಮೇತ ಉರುಳಿ ಬಿದ್ದಿರುವುದು.
ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಗುರುವಾರ ತಡರಾತ್ರಿ ಭಾರಿ ಗಾಳಿ, ಮಳೆ, ಸಿಡಿಲಿನ ಅಬ್ಬರ ನಡೆದಿದ್ದು, ಇದರಿಂದ ಜಾನುವಾರು ಜೀವಹಾನಿ, ಮನೆಗಳಿಗೆ ಹಾನಿ ಹಾಗೂ ಮನೆಗಳಿಗೆ ಹಾಕಿದ್ದ ಪತ್ರಾಸಗಳು ಹಾರಿ ಹೋಗಿರುವುದು ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿ ಆಗಿರುವ ವರದಿಯಾಗಿದೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಕೆಂಡದ ಬಿಸಿಲಿಗೆ ಜನರು ಹೈರಾಣ ಆಗಿದ್ದರು. ಮಳೆ ಆಗದೇ ವಾತಾವರಣ ಕೊತಕೊತ ಎನ್ನುತ್ತಿತ್ತು. ಗುರುವಾರ ರಾತ್ರಿ ಭಾರಿ ಮಳೆ ಸುರಿಯುವ ಲಕ್ಷಣಗಳು ಗೋಚರಿಸಿದರೂ ಭಾರಿ ಗಾಳಿ ಮತ್ತು ಗುಡುಗು, ಮಿಂಚುಗಳ ಆರ್ಭಟ ವರಣಾರ್ಭಟಕ್ಕೆ ಬ್ರೇಕ್ ಹಾಕಿದವು.
ಮಳೆಯ ಜೊತೆಗೆ ಸಿಡಿಲಿನ ಅಬ್ಬರ ಹಾಗೂ ಭಾರಿ ಗಾಳಿಯ ಆರ್ಭಟ ನಡೆದಿದ್ದರಿಂದ ಸಾಕಷ್ಟು ಹಾನಿ ಅನುಭವಿಸುವಂತಾಗಿದೆ. ಜೊತೆಗೆ ತಗ್ಗು ಪ್ರದೇಶದಲ್ಲಿ ಇರುವ ಮನೆ ಮತ್ತು ಇತರೆ ಕಟ್ಟಡಗಳಿಗೆ ನೀರು ನುಗ್ಗಿದೆ. ವಿವಿಧೆಡೆ ವಿದ್ಯುತ್ ಕಂಬಗಳು ಮತ್ತು ಗಿಡ-ಮರಗಳು ಉರುಳಿ ಬಿದ್ದಿರುವ ವರದಿಯಾಗಿದೆ.
ಜಿಲ್ಲಾದ್ಯಂತ ಗುರುವಾರ ತಡರಾತ್ರಿ ೭.೩ಎಂ.ಎA ಮಳೆ ಆಗಿರುವ ವರದಿಯಾಗಿದೆ. ಮುಧೋಳ ತಾಲೂಕಿನಲ್ಲಿ ಗರಿಷ್ಠ ೨೦.೨ ಎಂಎA ಮಳೆ ಆಗಿದ್ದರೆ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕನಿಷ್ಠ ೦.೧ ಎಂಎA ಮಳೆ ಆಗಿದೆ. ಉಳಿದಂತೆ ಬಾದಾಮಿ ತಾಲೂಕಿನಲ್ಲಿ ೧೧.೩ಎಂಎA, ಬಾಗಲಕೋಟೆ ತಾಲೂಕಿನಲ್ಲಿ ೭.೭ಎಂಎA, ಬೀಳಗಿ ತಾಲೂಕಿನಲ್ಲಿ ೯.೩ ಎಂಎA, ಹುನಗುಂದ ತಾಲೂಕು ೨.೩ಎಂಎA, ಜಮಖಂಡಿ ತಾಲೂಕು ೦.೪ ಎಂಎA, ಗುಳೇದಗುಡ್ಡ ತಾಲೂಕು ೩.೯ಎಂಎA, ಇಳಕಲ್ಲ ತಾಲೂಕು ೧.೨ಎಂಎA ಮಳೆ ಆಗಿದೆ.
ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಆನಂದ ತೋಟಗೇರ ಎನ್ನುವವರಿಗೆ ಸೇರಿದ ಒಂದು ಸಣ್ಣ ಎತ್ತು ಸಾವನ್ನಪ್ಪಿದೆ. ಹಾಗೆಯೇ ಗ್ರಾಮದಲ್ಲಿ ಪತ್ರಾಸ ಹಾರಿಹೋಗಿ ಅದರ ಮೇಲಿದ್ದ ಕಲ್ಲು ಬಿದ್ದು ಮಲ್ಲಪ್ಪ ಗಡ್ಡಿ ಎನ್ನುವವರಿಗೆ ಗಾಯವಾಗಿದೆ. ಇನ್ನೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಜೊತೆ ಬೀಸಿದ ಭಾರಿ ಗಾಳಿಯಿಂದ ೩೮ ತಗಡಿನ ಶೆಡ್ಡುಗಳು ಹಾರಿಹೋಗಿವೆ. ಹಾಗೆಯೇ ರೊಳ್ಳಿ ಗ್ರಾಮದಲ್ಲಿ ೧೦ ಮತ್ತು ಕೊಪ್ಪ ಎಸ್‌ಕೆ ಗ್ರಾಮದಲ್ಲಿ ೬ ದನದ ತಗಡಿನ ಶೆಡ್ಡುಗಳು ಹಾರಿ ಹೋಗಿದ್ದು, ಮೂರು ಮನೆಗಳಿಗೆ ಹಾನಿಯಾಗಿದ್ದು, ೧.೦೨ ಹೆಕ್ಟರ್ ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಮುಧೋಳ ತಾಲೂಕಿನಲ್ಲೂ ಸಹ ಮಳೆ ಹಾನಿ ಸಂಭವಿಸಿರುವ ವರದಿಯಾಗಿದ್ದು, ೧೧ ಮನೆಗಳ ಪತ್ರಾಸ್, ೧ ಮನೆಗೆ ಹಾನಿಯಾಗಿದೆ. ತಾಲೂಕಿನಲ್ಲಿ ೧೩.೪೩ ಹೆಕ್ಟರ್ ತೋಟಗಾರಿಕೆ ಮತ್ತು ೧.೪೦ ಹೆಕ್ಟರ್ ಕೃಷಿ ಸೇರಿ ಒಟ್ಟು ೧೪.೮೩ ಹೆಕ್ಟರ್ ಪ್ರದೇಶದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳು ಹಾನಿಯಾಗಿವೆ. ಜೊತೆಗೆ ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಲ್ಲಿನ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದ್ದು, ಇಡೀ ರಾತ್ರಿ ಠಾಣಾ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುವಂತಾಯಿತು. ಇದರ ಜೊತೆಗೆ ಬಾಗಲಕೋಟೆ, ಬಾದಾಮಿ ತಾಲೂಕುಗಳಲ್ಲಿ ಸಹ ಮಳೆ, ಗಾಳಿ ಅಬ್ಬರ ಆಗಿದ್ದು, ಅಲ್ಲಿ ಏನೆಲ್ಲ ಹಾನಿಯಾಗಿದೆ ಎನ್ನುವ ವರದಿ ಬರಬೇಕಿದೆ. ಜಿಲ್ಲಾದ್ಯಂತ ಮಳೆ, ಗಾಳಿಗೆ ಸಾಕಷ್ಟು ಗಿಡಮರಗಳು, ವಿದ್ಯುತ್ ಕಂಬಗಳು ಉರಳು ಬಿದ್ದಿವೆ.