ಮಹಾಲಿಂಗಪುರದ ಕೆಂಗೇರಿಮಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮದದಲ್ಲಿ ಮಲ್ಲಿಕಾರ್ಜುನ ವಜ್ರಮಟ್ಟಿ ಮಾತನಾಡಿದರು. ಶಂಕರ ಹುಕ್ಕೇರಿ, ಬಸವರಾಜಧಡೂತಿ ಇತರರಿದ್ದರು. 
ಬಾಗಲಕೋಟೆ

ನೆಮ್ಮದಿ ಜೀವನಕ್ಕೆ ಆರೋಗ್ಯ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ವಜ್ರಮಟ್ಟಿ ಹೇಳಿಕೆ
  • ವಿಶ್ವ ತಂಬಾಕು ನಿಷೇಧ ದಿನ ಆಚರಣೆ
  • ದುಶ್ಚಟಗಳಿಲ್ಲದೇ ಆರೋಗ್ಯ ಮತ್ತು ನೆಮ್ಮದಿ ಜೀವನ ನಡೆಸಬೇಕು
ಮಹಾಲಿಂಗಪುರ: ವಾಸಿಸುವ ಮನೆ ಸಣ್ಣದಿರಲಿ-ದೊಡ್ಡದಿರಲಿ, ಯಾವುದೇ ದುಶ್ಚಟಗಳಿಲ್ಲದೇ ಆರೋಗ್ಯ ಮತ್ತು ನೆಮ್ಮದಿ ಜೀವನ ನಡೆಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರನ್ನಬೆಳಗಲಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ ವಜ್ರಮಟ್ಟಿ ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನತೆಯನ್ನು ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳುವಲ್ಲಿ ತಂದೆ-ತಾಯಿಗಳ ಪಾತ್ರ ಮುಖ್ಯವಾಗಿದೆ. ಮಕ್ಕಳಿಗೆ ದುಶ್ಚಟಗಳ ಪರಿಣಾಮ ತಿಳಿಸಬೇಕು. ಉತ್ತಮ ಸಂಸ್ಕೃತಿ-ಸಂಸ್ಕಾರ ನೀಡಬೇಕು. ಭವಿಷ್ಯದಲ್ಲಿ ಆರೋಗ್ಯಪೂರ್ಣ ಸದೃಢ ಯುವಶಕ್ತಿ ಹೊಂದಿದ ಸಮಾಜ ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳದ ಪೂಜ್ಯರು ಹಲವು ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರಿಗೆ ಕಡಿಮೆ ಬಡ್ಡಿ ದರಲ್ಲಿ ಸಾಲ, ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಸ್ವ-ಉದ್ಯೋಗದ ಮಾಹಿತಿ, ತರಬೇತಿ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಮದ್ಯವರ್ಜನ ಶಿಬಿರ ಸೇರಿ ವ್ಯಸನ ಮುಕ್ತ-ಆರೋಗ್ಯಪೂರ್ಣ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯ ಶಂಕರ ಹುಕ್ಕೇರಿ ಮಾತನಾಡಿ, ತಂಬಾಕು ಸೇವನೆಯಿಂದ ದೇಹದಲ್ಲಿ ಆಗುವ ದುಷ್ಪರಿಣಾಮಗಳು, ಅದರಿಂದ ಬರುವ ಭಯಾನಕ ಕಾಯಿಲೆಗಳು, ಕುಟುಂಬಸ್ಥರು ಪಡುವ ಕಷ್ಟಗಳು ಜೊತೆಗೆ ಕುಟುಂಬ ಮತ್ತು ಸಮಾಜದ ಮೇಲೆ ಆಗುವ ಪರಿಣಾಮಗಳ ಕುರಿತು ತಿಳಿಸಿದರು.
ಧರ್ಮಸ್ಥಳ ಸದಸ್ಯರ ಒಕ್ಕೂಟದ ಸಭೆ ನಡೆಸಿ ಪ್ರಗತಿನಿಧಿ ಸರಳೀಕರಣ, ವಿನಿಯೋಗದಾರರ ಬದಲಾವಣೆ, ಪಿಆರ್‌ಕೆ ಮತ್ತು ಆರ್ಥಿಕ ಶಿಸ್ತಿನ ಕುರಿತು ಮಾಹಿತಿ ನೀಡಲಾಯಿತು. ಬಸವರಾಜ ಧಡೂತಿ, ಅನ್ನಪೂರ್ಣಾ ಇತರರಿದ್ದರು.