ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಈಚೆಗೆ ಎಡಿಸಿ ಅಶೋಕ ತೇಲಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹ ಇಲಾಖೆಯ ಸಮನ್ವಯ ಸಮಿತಿ ಸಭೆ ನಡೆಯಿತು. ಕೃಷಿ, ತೋಟಗಾರಿಕೆ ಅಧಿಕಾರಿಗಳು ಇದ್ದರು.
- ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೂಚನೆ
- ಸಮನ್ವಯ ಸಮಿತಿ ಸಭೆ
- ಬೆಳೆ ಸಮೀಕ್ಷೆ ಕೈಗೊಳ್ಳುವ ಸಮಯದಲ್ಲಿ ಗ್ರಾಮ ನಿವಾಸಿ ನಿಖರವಾದ ಬೆಳೆಗಳ ವಿವರಗಳನ್ನು ದಾಖಲಿಸಬೇಕು
ಬಾಗಲಕೋಟೆ: ಕರ್ನಾಟಕ ರೈತ ಫಸಲ್ ಭಿಮಾ ಯೋಜನೆಯಡಿ ವಿವಿಧ ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ಮಾರ್ಗಸೂಚಿ ಅನುಸಾರ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಸಂಖ್ಯಾ ಸಂಗ್ರಹ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಪ್ರಯೋಗಗಳನ್ನು ತಾಲೂಕಿನ ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮಾರ್ಗಸೂಚಿ ಪ್ರಕಾರ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲು ತಿಳಿಸಿದರು.
ಬೆಳೆ ಸಮೀಕ್ಷೆ ಕೈಗೊಳ್ಳುವ ಸಮಯದಲ್ಲಿ ಗ್ರಾಮ ನಿವಾಸಿ ನಿಖರವಾದ ಬೆಳೆಗಳ ವಿವರಗಳನ್ನು ದಾಖಲಿಸಬೇಕು. ಹಿಡುವಳಿದಾರರ ಜಮೀನಿನಲ್ಲಿ ನೀರಾವರಿ ಮೂಲಗಳು ಹಾಗೂ ವ್ಯವಸಾಯೇತರ ಉಪಯೋಗಕ್ಕಾಗಿ ಬಳಸಿದ ಕಟ್ಟಡಗಳ ವಿವರಗಳನ್ನು ಸರಿಯಾಗಿ ದಾಖಲಿಸಲು ತಿಳಿಸಿದರು.
ಜನನ, ಮರಣ ನೋಂದಣಿಯಲ್ಲಿ ಯಾವುದೇ ಕಾರಣಕ್ಕೆ ವಿಳಂಬವಾಗಬಾರದು. ಶೇ. 100ರಷ್ಟು ನೋಂದಣಿಗೆ ಕ್ರಮಕೈಗೊಳ್ಳಬೇಕು. ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರವನ್ನು ಪ್ರತಿ ತಿಂಗಳು ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಜನನ, ಮರಣ ನೋಂದಣಿ ಸಮಯದಲ್ಲಿ ಸಂಗ್ರಹವಾದ ಶುಲ್ಕವನ್ನು ಪ್ರತಿ ತಿಂಗಳು ಭರಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಜಂಟಿ ತೋಟಗಾರಿಕೆ ನಿರ್ದೇಶಕ ರವೀಂದ್ರ ಹಕಾಟೆ, ಜಿಲ್ಲಾ ಸಂಖ್ಯಾ ಸಂಗ್ರಹ ಇಲಾಖೆಯ ಜಿಲ್ಲಾ ಅಧಿಕಾರಿ ಗೌರಮ್ಮ ಸುಂಕದ, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಿದ್ದರು.