ಹುನಗುಂದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ತಾಲೂಕು ನೋಡಲ್ ಅಧಿಕಾರಿ ಮಲ್ಲನಗೌಡ ಬಿರದಾರ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ, ಇಒ ಮುರಳೀಧರ ದೇಶಪಾಂಡೆ ಇದ್ದರು. 
ಬಾಗಲಕೋಟೆ

ವಿಪತ್ತು ನಿರ್ವಹಣೆ ಸಮರ್ಪಕ ನಿಭಾಯಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ನೋಡಲ್ ಅಧಿಕಾರಿ ಮಲ್ಲನಗೌಡ ಬಿರದಾರ ಸೂಚನೆ
  • ತಾಲೂಕು ಮಟ್ಟದ ಸಭೆ
  • ಮುಂಬರುವ ಮುಂಗಾರಿನಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹ ಬರುವ ಸಾಧ್ಯತೆ ಅಧಿಕ
ಹುನಗುಂದ : ಮುಂಬರುವ ಮುಂಗಾರಿನಲ್ಲಿ ಅತಿಯಾದ ಮಳೆ ಹಾಗೂ ಪ್ರವಾಹ ಬರುವ ಸಾಧ್ಯತೆ ಅಧಿಕವಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಮುಂಜಾಗ್ರತೆ ಕ್ರಮವಾಗಿ ಯಾವುದೇ ಅವಘಡ ಸಂಭವಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ತಾಲೂಕು ನೋಡಲ್ ಅಧಿಕಾರಿ ಮಲ್ಲನಗೌಡ ಬಿರದಾರ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಬರುವ ಸಾಧ್ಯತೆ ಕುರಿತು, ನದಿ, ಹಳ್ಳಗಳ ಸಮೀಪ ಜನ ಜಾನುವಾರು ಅನಾವಶ್ಯಕ ತಿರುಗಾಡದಂತೆ, ಶಿಥಿಲಗೊಂಡ ಮನೆಗಳಲ್ಲಿ ಜನ-ಜಾನುವಾರು ವಾಸವಿರದಂತೆ, ಅಂಗನವಾಡಿ ಮತ್ತು ಶಾಲಾ ಕಟ್ಟಡಗಳು ಸುಗಮ ಸುಸ್ಥಿತಿಯಲ್ಲಿರುವ ಕುರಿತು ಹೀಗೆ ಹಲವಾರು ರೀತಿಯ ಜೀವಹಾನಿಯಾಗದಂತೆ ಎಲ್ಲ ಬಗೆಯ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದರು.
ಈ ಕುರಿತು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ಮುಂಚಿತವಾಗಿ ಡಂಗೂರ ಸಾರಬೇಕು ಎಂದು ತಿಳಿಸಿದರು.
ತಾ.ಪಂ. ಇಒ ಮುರಳೀಧರ ದೇಶಪಾಂಡೆ ಮಾತನಾಡಿ, ನದಿಯ ಬ್ಯಾರೇಜ್‌ಗಳ ಎಲ್ಲ ಗೇಟ್‌ಗಳನ್ನು ತಕ್ಷಣ ಓಪನ್ ಮಾಡಿ ನದಿಯ ಸುತ್ತಲಿರುವ ಯಾವುದೇ ಸ್ಥಳಕ್ಕೆ ನೀರು ನುಗ್ಗದಂತೆ ಅಯಾ ಭಾಗದ ಗ್ರಾ.ಪಂ. ಮತ್ತು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಪರಿಸ್ಥಿತಿ ಕೈಮೀರಿ ಯಾವುದೇ ಮನುಷ್ಯ ಜೀವನ ಹಾನಿ, ಪ್ರಾಣಿ ಜೀವ ಹಾನಿ, ಮನೆ ಕುಸಿಯುವುದು. ಶಾಲಾ ಕಟ್ಟಡ ಮೇಲ್ಛಾವಣೆ ಕುಸಿಯುವುದು, ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವುದು ಹೀಗೆಲ್ಲ ಹಾನಿ ಸಂಭವಿಸಿದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ಮತ್ತು ಕಾರ್ಯನಿರ್ವಹಿಸುವ ತಂಡಗಳಿಂದ ತುರ್ತು ಕ್ರಮದ ಜೊತೆಗೆ ಪ್ರತಿ ಗ್ರಾಮಗಳಲ್ಲಿ ಯಾವುದೇ ಘಟನೆ ಮಾಹಿತಿ ಹಂಚಿಕೊಳ್ಳಲು ತಾಲೂಕಾ ಆಡಳಿತದಲ್ಲಿ ಸಹಾಯವಾಣಿ ಸಂಪರ್ಕ ಒದಗಿಸಲಾಗುವದು ಎಂದರು.
ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ಮಾತನಾಡಿ, ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ವ್ಯವಸ್ಥೆ ಮತ್ತು ಜಾನುವಾರುಗಳಿಗೆ ಪಶು ಚಿಕಿತ್ಸಾಲಯ ವ್ಯವಸ್ಥೆ ಕಲ್ಪಿಸಲಾಗುವದು. ಒಟ್ಟಾರೆ ನಿರ್ವಹಣಾ ತಂಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆ ಮುಖ್ಯಸ್ಥರು ಮತ್ತು ಸಿಬ್ಬಂದಿ ಸಕಾಲಕ್ಕೆ ಸ್ಪಂದಿಸಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.