ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಗುರುದೇವ ಸಿದ್ಧೇಶ್ವರ ಶ್ರೀಗಳ 20ನೇ ಪುಣ್ಯಾರಾಧನ ಮಹೋತ್ಸವ ಹಾಗೂ ಅನುಭಾವದಂಗಳ-164 ಸಮಾರಂಭದಲ್ಲಿ ಸಾಹಿತಿ, ಬರಹಗಾರ ಎಸ್. ಎಂ. ದಾಶ್ಯಾಳ ಮಾತನಾಡಿದರು. ಗುರುಸಿದ್ಧೇಶ್ವರ ಶ್ರೀಗಳು, ಶಾರದಾ ಮುಳ್ಳೂರ, ಸುಪ್ರೀಯಾ ನಿಪ್ಪಾಣಿ, ಮಹಾದೇವ ಕವಿಶೆಟ್ಟಿ, ಬಿ.ಆರ್. ಪೊಲೀಸ್‌ಪಾಟೀಲ ಇತರರಿದ್ದರು. 
ಬಾಗಲಕೋಟೆ

ಗುರುದೇವ ಸಿದ್ಧೇಶ್ವರರ ಬದುಕು ಸಮಾಜಕ್ಕೆ ಆದರ್ಶ

ಪ್ರಮುಖ ಮುಖ್ಯಾಂಶಗಳು

  • ಬರಹಗಾರ ಎಸ್.ಎಂ. ದಾಶ್ಯಾಳ ಅಭಿಮತ
  • ಶ್ರೀಗಳ 20ನೇ ಪುಣ್ಯಾರಾಧನೆ ಮಹೋತ್ಸವ
ರಬಕವಿ/ಬನಹಟ್ಟಿ: ಗುರುದೇವ ಬ್ರಹ್ಮಾನಂದ ಆಶ್ರಮದ ಹಿಂದಿನ ಪೀಠಾಧಿಪತಿ ಗುರುದೇವ ಸಿದ್ಧೇಶ್ವರ ಶ್ರೀಗಳು ಅಧ್ಯಾತ್ಮವನ್ನು ಆಳವಾಗಿ ಅಧ್ಯಯನ ಮಾಡಿ ಲಕ್ಷಾಂತರ ಭಕ್ತರಿಗೆ ಜೀವನ ಮೌಲ್ಯಗಳನ್ನು ಬೋಧಿಸಿದ ಮಹಾನ್ ಸಂತರು ಎಂದು ಸಾಹಿತಿ ಹಾಗೂ ಬರಹಗಾರ ಎಸ್.ಎಂ. ದಾಶ್ಯಾಳ ಹೇಳಿದರು.
ನಗರದ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಮಂಗಳವಾರ ನಡೆದ ಗುರುದೇವ ಸಿದ್ಧೇಶ್ವರ ಶ್ರೀಗಳ 20ನೇ ಪುಣ್ಯಾರಾಧನೆ ಮಹೋತ್ಸವ ಹಾಗೂ ಅನುಭಾವದಂಗಳ-164 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶ್ರೀಗಳು ಎಂಟು ಆಶ್ರಮಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಆಧ್ಯಾತ್ಮ, ಶಿಕ್ಷಣ ಮತ್ತು ದಾಸೋಹ ಸೇವೆಯನ್ನು ವಿಸ್ತರಿಸಿ ಸಮಾಜಮುಖಿ ಕಾರ್ಯಗಳನ್ನು ನಡೆಸಿದರು. ಅವರ ಅಗಲಿಕೆ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದ್ದು, ಅವರ ಆದರ್ಶಗಳನ್ನು ಸ್ಮರಿಸಿ ಅನುಸರಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಗುರುದೇವ ಸಿದ್ಧೇಶ್ವರ ಶ್ರೀಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರೂ ಪ್ರಚಾರದಿಂದ ದೂರವಿದ್ದು ಆಶ್ರಮಕ್ಕೆ ಆಗಮಿಸುವ ಭಕ್ತರಿಗೆ ಮಾತ್ರ ಮಾರ್ಗದರ್ಶನ ನೀಡುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಆಶ್ರಮಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜೋಪಯೋಗಿ ಸೇವೆಗಳು ವಿಸ್ತರಿಸಿದ್ದು, ಜನಕಲ್ಯಾಣಕ್ಕಾಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದರು.
ಇದಕ್ಕೂ ಮುನ್ನ ಶ್ರೀಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಆಶ್ರಮ ಆವರಣದಲ್ಲಿ ನಡೆಯಿತು. ಬಳಿಕ ಮಹಾಪ್ರಸಾದ ವಿತರಣೆ ಜರುಗಿತು. ಕಾರ್ಯಕ್ರಮದ ಅಂಗವಾಗಿ ಸುಪ್ರೀಯಾ ನಿಪ್ಪಾಣಿ ನಿರ್ದೇಶನದ, ನೀಲಗಂಗಾ ಚರಂತಿಮಠ ಅವರ ಕಾದಂಬರಿ ಆಧಾರಿತ ಉತ್ತರ ಕರ್ನಾಟಕದ ನೈಜ ಕಥೆಯನ್ನು ಒಳಗೊಂಡ 'ಚುರುಮುರಿಯಾ' ಚಲನಚಿತ್ರ ಪ್ರದರ್ಶನಗೊಂಡಿತು.
ಸುಪ್ರೀಯಾ ನಿಪ್ಪಾಣಿ, ಮಹಾದೇವ ಕವಿಶೆಟ್ಟಿ, ಬಿ.ಆರ್. ಪೊಲೀಸ್‌ಪಾಟೀಲ, ಶಾರದಾ ಮುಳ್ಳೂರ, ಎಂ.ಎಸ್. ಬದಾಮಿ, ನೀಲಗಂಗಾ ಚರಂತಿಮಠ, ಜಿ.ಎಚ್. ಚಿತ್ತರಗಿ, ವೆಂಕಟೇಶ ನಿಂಗಸಾನಿ, ಬುದ್ದಪ್ಪ ಕುಂದಗೋಳ, ವೈ.ವೈ. ಕೊಕ್ಕನವರ, ವಿರುಪಾಕ್ಷಯ್ಯ ಹಿರೇಮಠ, ಯಶವಂತ ವಾಜಂತ್ರಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.