ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೆರವೇರಿಸಿದರು.
- ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಂಭ್ರಮ
- ರಾಜ್ಯದ ಅಭಿವೃದ್ಧಿಗೆ ಯುವ ಜನಾಂಗ ಸನ್ನದ್ದರಾಗಿ ಸಚಿವ ತಿಮ್ಮಾಪುರ ಸಂದೇಶ
- ಗ್ಯಾರಂಟಿ ಯೋಜನೆಗಳು ಜನರ ಬದುಕಿನ ಚಿತ್ರಣವನ್ನೆ ಬದಲಿಸಿವೆ.
ಬಾಗಲಕೋಟೆ: ರಾಜ್ಯದ ಪ್ರಗತಿಗಾಗಿ ಹಾಗೂ ಜನರ ಒಳಿತಿಗಾಗಿ ನಮ್ಮ ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಕ್ಕೆ ತಂದಿದೆ. ಇವುಗಳಲ್ಲಿ ಗ್ಯಾರಂಟಿ ಯೋಜನೆಗಳು ಜನರ ಬದುಕಿನ ಚಿತ್ರಣವನ್ನೆ ಬದಲಿಸಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಚುನಾವಣೆ ವೇಳೆ ಜನರಿಗೆ 592 ಭರವಸೆ ನೀಡಿದ್ದೆವು. ಆ ಪೈಕಿ ಈಗಾಗಲೇ 243 ಭರವಸೆ ಈಡೇರಿಸಿದ್ದೇವೆ. ನಮ್ಮ ರಾಜ್ಯ ಅಭಿವೃದ್ಧಿಯ ವೇಗದಲ್ಲಿ ತೀವ್ರ ಮುನ್ನಡೆ ಸಾಧಿಸಬೇಕಾದರೆ ಯುವ ಜನಾಂಗ ಸನ್ನದ್ದರಾಬೇಕಿದೆ. ಪ್ರಗತಿಪರ ರಾಜ್ಯವನ್ನಾಗಿ ರೂಪಿಸಲು ಎಲ್ಲರೂ ಕ್ರೀಯಾಶೀಲರಾಗಿ ದಣಿವರಿಯದೆ ದುಡಿಯಬೇಕಿದೆ. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತ್ಯಾಗ, ಬಲಿದಾನ, ಪ್ರಾಣಾರ್ಪಣೆ ಮಾಡಿದ ಅಸಂಖ್ಯಾತ ದೇಶ ಭಕ್ತರನ್ನು, ಮಹಾನ್ ಮೇಧಾವಿಗಳನ್ನು ನೆನಪಿಸಬೇಕಾಗುತ್ತದೆ. ಇದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ ಎಂದರು.
ಪ್ರಗತಿ ವಿವರ
ಗಣರಾಜ್ಯೋತ್ಸವ ಸಂದೇಶದಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿ, ಅವುಗಳಿಂದ ಜನರಿಗೆ ಆಗಿರುವ ಪ್ರಯೋಜನಗಳನ್ನು ಜನರ ಎದುರು ಬಿಚ್ಚಿಟ್ಟರು. ಗ್ಯಾರಂಟಿ ಯೋಜನೆಗಳು, ವಸತಿ ಇಲಾಖೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳ ನಿರ್ಮಾಣ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಅಂಕಿ ಸಂಖ್ಯೆಗಳನ್ನು ಹರವಿದರು.
ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ನಮ್ಮ ರಾಜ್ಯದ ತಲಾ ಆದಾಯವೂ ಮೊದಲ ಸ್ಥಾನ ಪಡೆದಿರುವುದು ನಾಡಿಗೆ ಹೆಮ್ಮೆ ತರುವ ಸಂಗತಿ. ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಚಾಲುಕ್ಯ ಉತ್ಸವಕ್ಕೆ 11 ವರ್ಷಗಳ ಬಳಿಕ ಮತ್ತೆ ಚಾಲನೆ ನೀಡಿ, ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಸಲಾಯಿತು ಎಂದರು.
ಇನ್ನು ಜಿಲ್ಲೆಯ ಕ್ರೀಡಾಪಟುಗಳ ಸಾಧನೆ, ರೈತರು ತಾಳೆ ಬೆಳೆ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಆಗುತ್ತಿರುವುದು, ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯು ಕೆಂಪು ಮೆಣಸಿನಕಾಯಿ ಹಾಗೂ ಇತರೆ ಬೆಳಗಳನ್ನು ರೈತರಿಂದ ನೇರವಾಗಿ ಖರೀದಿಸಿ ವಿವಿಧ ರಾಜ್ಯ ಹಾಗೂ ದೇಶಗಳಿಗೆ ರಫ್ತು ಮಾಡಿ ಅಂದಾಜು 75 ಕೋಟಿ ರೂ. ವಹಿವಾಟು ನಡೆಸಿರುವುದನ್ನು ಸಚಿವರ ಮೆಲಕು ಹಾಕಿದರು.
ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಬುಡಾದ ಅಧ್ಯಕ್ಷ ಅಬ್ದುಲ್‌ರಜಾಕ ಬೇನೂರ, ಜಿಲ್ಲಾಧಿಕಾರಿ ಸಂಗಪ್ಪ. ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಯುಕೆಪಿ ಮಾಹಾ ವ್ಯವಸ್ಥಾಪಕ ಗಜಾನನ ಬಾಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಅಪರ ಜಿಲ್ಲಾಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವ್ ಸ್ವಾಮಿ ಮತ್ತಿತರರು ಇದ್ದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಜಿಲ್ಲಾಡಳಿತದ ವತಿಯಿಂದ ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು. ಸಿದ್ದು ಮೂಲಿಮನಿ (ಸಾಹಿತ್ಯ ಕ್ಷೇತ್ರ), ಬಸವರಾಜ ಡಂಬಳ (ಸಂಗೀತ), ಮಹಾದೇವ ಕಲ್ಯಾಣಿ (ಕರಡಿ ಮಜಲು), ವೆಂಕಪ್ಪ ಕ್ವಾನ್ಯಾಗೋಳ (ಡೊಳ್ಳಿನಪದ), ಹನಮಂತ ಭಜಂತ್ರಿ (ಕರಡಿ ಮಜಲು), ರಮೇಶ ಬಡಿಗೇರ (ಭಜನೆ), ಲೇಶಪ್ಪ ಬಸರಕೋಡ (ಪುರವಂತಿಕೆ), ಗಿರಿಮಲ್ಲಪ್ಪ ಪೂಜಾರಿ (ಚಿತ್ರಕಲೆ), ಭಾರತಿ ಹಿರೇಮಠ (ಅಂಗಾಂಗ ದಾನ), ಮಹಾದೇವ ಮಳ್ಳಿಗೇರಿ (ಕೃಷಿ), ಅಡಿವೇಶ ಡೊಂಕಪ್ಪಗಳ, ರಮೇಶ ನಾಯ್ಕರ (ಸಮಾಜ ಸೇವೆ), ವಿನೋದ ಸಂದಿಮನಿ, ಪ್ರಭಾಸ ತಳವಾರ, ಗಂಗಾ ದಂಡಿನ, ಹನಮಂತ ಹುಲ್ಲಿಕೇರಿ, ಏಕನಾಥ ದಿವಟಗಿ (ಕ್ರೀಡೆ), ಸಂತೋಷ ಹಜೇರಿ (ಛಾಯಾಗ್ರಾಹಕ), ಅಭಯ ಮನಗೂಳಿ, ಗುರು ಹಿರೇಮಠ, ಹೇಮಾ ಕಡಿವಾಳ (ಮಾಧ್ಯಮ). ಹಾಗೆಯೇ ಎಸ್ಸೆಸ್ಸೆಲ್ಸಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದ 50 ಸಾವಿರ ರೂ. ಬಹುಮಾನದ ಜೊತೆ ಸನ್ಮಾನಿಸಲಾಯಿತು.