ಗುಳೇದಗುಡ್ಡದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಬಿಆರ್‌ಸಿ ಸಂಗಮೇಶ ಯಲಿಗಾರ, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ ಬಡಿಗೇರ, ಸಿಆರ್‌ಪಿ ಭಾಗೀರತಿ ಆಲೂರು. ಎಸ್‌ಡಿಎಂಸಿ ಉಪಾಧ್ಯಕ್ಷ ಮೂಕಪ್ಪ ಹಾದಿಮನಿ ಇತರರಿದ್ದರು 
ಬಾಗಲಕೋಟೆ

ಸರ್ಕಾರಿ ಶಾಲೆ ಅಸಡ್ಡೆ ಸಲ್ಲ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಬಿಆರ್‌ಸಿ ಸಂಗಮೇಶ ಯಲಿಗಾರ ಹೇಳಿಕೆ
  • ಕಾನ್ವೆಂಟ್‌ಗಳ ವ್ಯಾಮೋಹ ಬೇಡ
ಗುಳೇದಗುಡ್ಡ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹೆಚ್ಚಿನ ಸೌಲಭ್ಯ ಹೊಂದಿವೆ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯುತ್ತಿದೆ. ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದು ಬಿಆರ್‌ಸಿ ಸಂಗಮೇಶ ಯಲಿಗಾರ ಹೇಳಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೬-೨೭ನೇ ಸಾಲಿನ ಹೊಸದಾಗಿ ಎಲ್‌ಕೆಜಿ ದ್ವಿಭಾಷಾ ಮಾಧ್ಯಮ ತರಗತಿಗೆ ಉಚಿತ ಪ್ರವೇಶ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಿಗೆ ರಾಜ್ಯಸರ್ಕಾರ ಉಚಿತವಾಗಿ ಸಮವಸ್ತ್ರ, ಪಠ್ಯ-ಪುಸ್ತಕ, ಶೂ, ಬಿಸಿಯೂಟ ಮುಂತಾದ ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದಾರೆ. ಕಾನ್ವೆಂಟ್‌ಗಳ ಮೇಲಿನ ವ್ಯಾಮೋಹ ಬೇಡ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ ಬಡಿಗೇರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆಯಿಲ್ಲ. ಇಲ್ಲಿ ಶಿಸ್ತು ಬದ್ಧವಾಗಿ ಶಿಕ್ಷಣ ದೊರೆಯುತ್ತದೆ. ಸರ್ಕಾರಿ ಶಾಲೆಗಳೆಂದರೆ ಪಾಲಕರು ಅಸಡ್ಡೆ ತೋರಬಾರದು ಎಂದರು.
ಇದಕ್ಕೂ ಮೊದಲು ಮಕ್ಕಳಿಂದ ಶಾಲಾ ಆಂದೋಲನ ಜಾಥಾ ನಡೆಸಲಾಯಿತು. ಮಕ್ಕಳಿಗೆ ಹೂವು, ಸಿಹಿ ತಿನ್ನಿಸಿ ಶಾಲೆಗೆ ಸಂಭ್ರಮದಿಂದ ಬರಮಾಡಿಕೊಂಡರು. ಎಲ್‌ಕೆಜಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಸಿಆರ್‌ಪಿ ಭಾಗೀರತಿ ಆಲೂರು. ಎಸ್‌ಡಿಎಂಸಿ ಉಪಾಧ್ಯಕ್ಷ ಮೂಕಪ್ಪ ಹಾದಿಮನಿ, ಸದಸ್ಯರಾದ ದುರ್ಗವ್ವ ಮಾದರ, ಗಿರೀಶ್ ಚೋಳಾ, ಎಂ.ಬಿ ಗೌಡರ. ಮಲ್ಲು ಚೋಳಾ, ಗೋಪಾಲ ಧೂಪದ, ಮುಖ್ಯಗುರು ಎಂ.ಎಂ. ಚಿತ್ತರಗಿ. ಶಿಕ್ಷಕರಾದ ಬಿ.ಜಿ ನಾಗರಾಳ, ಜೆ.ಎಲ್ ಸಿಂಗದ, ಎಂ.ಕೆ. ಪತ್ತಾರ, ಎ.ಜಿ. ರಾಠೋಡ, ಅನ್ನಪೂರ್ಣ ಬಿ ಇತರರಿದ್ದರು.