ಬನಹಟ್ಟಿಯಲ್ಲಿ 16ನೇ ದಿನದ ಸರದಿ ಸತ್ಯಾಗ್ರಹದಲ್ಲಿ ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಮಾತನಾಡಿದರು. ಕಾಡಪ್ಪ ಶೇಗುಣಸಿ, ಮಲ್ಲು ಗಸ್ತಿ, ಕುಮಾರ ಕದಂ, ರವಿ ಪುಂಡೆ, ಪ್ರಕಾಶ ಮಾನೆ ಇತರರಿದ್ದರು.
- ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಹೇಳಿಕೆ
- ನೇಕಾರರ ಒಕ್ಕೊರಲಿನ ಬೆಂಬಲ
- ಭಜಂತ್ರಿ ಸಮಾಜದಿಂದ ಮೆರವಣಿಗೆ
ರಬಕವಿ/ಬನಹಟ್ಟಿ : ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಿಸಬೇಕೆಂಬ ಹಕ್ಕೊತ್ತಾಯದ ಹೋರಾಟ 16ನೇ ದಿನವೂ ತೀವ್ರಗೊಂಡಿತು. ಭಾನುವಾರ ಕೊರಮ (ಭಜಂತ್ರಿ) ಸಮಾಜ, ಕ್ಷತ್ರೀಯ ಮರಾಠಾ ಸಮಾಜ, ಮೋಪಗಾರ ಸಮಸ್ತ ದೈವ ಮಂಡಳಿ, ಅಕ್ಸಾ ಮಸೀದಿ ಮುಸ್ಲಿಂ ಬಾಂಧವರು ಹಾಗೂ ಅಶೋಕ ಕಾಲನಿ ನೂರಾರು ನೇಕಾರರು ಸರದಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆ ಮುಖಂಡ ನಂದು ಗಾಯಕವಾಡ ಮಾತನಾಡಿ, ಸರ್ಕಾರ ಹಾಗೂ ಅಽಕಾರಿಗಳ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಬನಹಟ್ಟಿ ಜನತೆ ತಾಳ್ಮೆ ಕಳೆದುಕೊಳ್ಳುವ ಮೊದಲೇ ನ್ಯಾಯಯುತ ಹಕ್ಕಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟದ ಸ್ವರೂಪ ಉಗ್ರವಾಗಲಿದೆ ಎಂದು ಎಚ್ಚರಿಸಿದರು.
ಮುಖಂಡ ಶರತ್ ಜಂಬಗಿ ಮಾತನಾಡಿ, ತೇರದಾಳ ಕ್ಷೇತ್ರದಲ್ಲಿಯೇ ಅತ್ಯಽಕ ಜನಸಾಂದ್ರತೆ, ಮತದಾರರು ಹಾಗೂ ಭೌಗೋಳಿಕ ಕೇಂದ್ರ ಸ್ಥಾನ ಹೊಂದಿರುವ ಬನಹಟ್ಟಿ ನೂಲಿನ ಗಿರಣಿ ಸಮೀಪದ ಕಂದಾಯ ಭೂಮಿಯೇ ಪ್ರಜಾಸೌಧ ನಿರ್ಮಾಣಕ್ಕೆ ಸೂಕ್ತವಾಗಿದೆ. ಇಲ್ಲಿಯೇ ಪ್ರಜಾಸೌಧ ನಿರ್ಮಿಸಿದರೆ ಇಡೀ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದರು.
ಕಾಡಪ್ಪ ಶೇಗುಣಸಿ, ಮಲ್ಲು ಗಸ್ತಿ, ಕುಮಾರ ಕದಂ, ರವಿ ಪುಂಡೆ, ಪ್ರಕಾಶ ಮಾನೆ, ಕಲ್ಲಪ್ಪ ಗೊಕಾಂವಿ, ಬಸವಂತ ಟರ್ಕಿ, ಸುರೇಶ ಭದ್ರನ್ನವರ, ಶಂಕರ ಹಡಲಗಿ, ಅಲ್ಲಪ್ಪ ಯಾದವಾಡ, ಬುಡಾನ ಜಮಾದಾರ, ರಾಜು, ಭಜಂತ್ರಿ ಇತರರಿದ್ದರು.
ವಿಶಿಷ್ಟ ಸಾಂಸ್ಕೃತಿಕ ಮೆರವಣಿಗೆ
ರಬಕವಿ/ಬನಹಟ್ಟಿ : ಪ್ರಜಾಸೌಧವನ್ನು ಬನಹಟ್ಟಿಯಲ್ಲೇ ನಿರ್ಮಿಸಬೇಕೆಂದು ಒತ್ತಾಯದೊಂದಿಗೆ ನಡೆಯುತ್ತಿರುವ ನಿರಂತರ ಸತ್ಯಾಗ್ರಹಕ್ಕೆ ಭಾನುವಾರ ಭಜಂತ್ರಿ ಸಮಾಜದ ಬಾಂಧವರು ವಿಶಿಷ್ಟ ಹಾಗೂ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಬೆಂಬಲ ವ್ಯಕ್ತಪಡಿಸಿ ಗಮನ ಸೆಳೆದರು.
ಭಜಂತ್ರಿ ಸಮಾಜದ ಪುರುಷರು ತಮ್ಮ ಸಾಂಪ್ರದಾಯಿಕ ಕಲೆ ಮತ್ತು ವಾದ್ಯ ಸೇವೆಯನ್ನು ಬಿಂಬಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರೆ, ಮಹಿಳೆಯರು ಪೊರಕೆ, ಬುಟ್ಟಿ ಸೇರಿ ತಮ್ಮ ಸಮಾಜದ ಸಾಂಪ್ರದಾಯಿಕ ಕಾಯಕವನ್ನು ಪ್ರತಿನಿಽಸುವ ವಿವಿಧ ವಸ್ತುಗಳನ್ನು ಹೊತ್ತು ನಗರಾದ್ಯಂತ ಮೆರವಣಿಗೆ ನಡೆಸಿದರು.
ಸಮಾಜದ ಬದುಕು, ಶ್ರಮ, ಕಾಯಕ ಮತ್ತು ಸಂಸ್ಕೃತಿಯ ಪ್ರತೀಕ ಮೂಡಿ ಬಂದಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
ನಮ್ಮ ಕಾಯಕ ನಮ್ಮ ಹೆಮ್ಮೆ, ಪ್ರಜಾಸೌಧ ನಮ್ಮ ಹಕ್ಕೆಂದು ಸಂದೇಶವನ್ನು ಸಾರುವ ರೀತಿಯಲ್ಲಿ ಸಮಾಜದ ಬಾಂಧವರು ಒಗ್ಗಟ್ಟಿನ ಪ್ರದರ್ಶನ ನೀಡಿದರು. ಮೆರವಣಿಗೆ ಪ್ರಜಾಸೌಧ ನಿರ್ಮಾಣಕ್ಕಾಗಿ ನಡೆಯುತ್ತಿರುವ ಸತ್ಯಾಗ್ರಹದ ಕೇಂದ್ರವಾದ ಚನ್ನಮ್ಮ ವೃತ್ತಕ್ಕೆ ಆಗಮಿಸಿ, 16ನೇ ದಿನದ ಸರದಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿದರು.