ಶಾರದಾಳದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಪ್ರಭು ಮಹಾರಾಜರ 29ನೇಯ ಜಾತ್ರಾ ಮಹೋತ್ಸವಕ್ಕೆ ಹಾಗೂ `ಅಕ್ಕಮಹಾದೇವಿ ಮಹಾಪುರಾಣ' ಪ್ರವಚನಕ್ಕೆ ಡಾ. ಶಿವಲಿಂಗಯ್ಯ ಶರಣರು ಪುರಾಣಿಕಮಠ ಚಾಲನೆ ನೀಡಿದರು. ನಿಂಗಪ್ಪ ಅರಕೇರಿ, ಹೊಳಬಸಯ್ಯ ಹಿರೇಮಠ, ಈರಪ್ಪ ಅರಕೇರಿ, ಯಲ್ಲಪ್ಪ ಅರಕೇರಿ, ರಾಮಚಂದ್ರ ಬಡಿಗೇರ ಇತರರಿದ್ದರು.
- ಡಾ. ಶಿವಲಿಂಗಯ್ಯ ಪುರಾಣಿಕಮಠ ಹೇಳಿಕೆ
- ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ
ಕಲಾದಗಿ: ಪರರಿಗೆ ಉಪಕಾರ ಮಾಡಿದರೆ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಜಾಗೃತಗೊಳ್ಳುತ್ತದೆ. ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಆಧ್ಯಾತ್ಮಿಕತೆ ಅತ್ಯುತ್ತಮ ಮಾರ್ಗ, ನಮ್ಮೊಳಗಿನ ಆತ್ಮವೇ ದೇವರು. ಈ ಸತ್ಯವನ್ನರಿತು ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ಎಂದು ಡಾ. ಶಿವಲಿಂಗಯ್ಯ ಶರಣರು ಪುರಾಣಿಕಮಠ ಹೇಳಿದರು.
ಸಮೀಪದ ಶಾರದಾಳ ಗ್ರಾಮದಲ್ಲಿ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ 29ನೇ ಜಾತ್ರಾ ಮಹೋತ್ಸವಕ್ಕೆ ಹಾಗೂ `ಅಕ್ಕಮಹಾದೇವಿ ಮಹಾ ಪುರಾಣ' ಪ್ರವಚನಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ಶರಣ, ಶರಣೆಯರ, ಮಹಾತ್ಮರ, ಸಾಧು-ಸಂತರು ಹೇಳಿದ ಸದ್ಬುದ್ಧಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ಮಹಿಳೆಯರ ಮಾಣಿಕ್ಯ ಎಂದೇ ಹೇಳಬಹುದಾದ ಶರಣೆ ಅಕ್ಕಮಹಾದೇವಿ ಯೋಗಿಯಾಗಿ ತಮ್ಮ ಜೀವನದುದ್ದಕ್ಕೂ ಭಕ್ತರು ಆಶ್ಚರ್ಯ ಪಡುವಂತ ಪವಾಡಗಳನ್ನು ಮಾಡುತ್ತಾ, ದೈವ ಸಾಕ್ಷಾತ್ಕಾರ, ಆತ್ಮವಿದ್ಯೆ, ಉತ್ತಮ ಸಂಸ್ಕಾರ, ಮಂತ್ರಯೋಗ, ಭಕ್ತಿಯೋಗ, ಹಠಯೋಗ, ಪರಮಾತ್ಮನ ವಿಭೂತಿಗಳನ್ನು ತಿಳಿದುಕೊಂಡು ಗುರುವಿನ ಅನುಮತಿ ತೆಗೆದುಕೊಂಡು ಲೋಕ ಕಲ್ಯಾಣಕ್ಕಾಗಿ, ಪರಹಿತಕ್ಕಾಗಿಯೇ ತಮ್ಮ ಜೀವನವನ್ನು ಸವೆಸಿದರು ಎಂದು ಹೇಳಿದರು.
ಜೇರಟಗಿಯ ಶಿವಯ್ಯ ಗವಾಯಿಗಳಿಂದ ಸಂಗೀತ ಸೇವೆ, ಜೇವರ್ಗಿಯ ಶೇಖರ ಅಂಕಲಗಿ ಅವರಿಂದ ತಬಲಾ ಸೇವೆ ನೆರವೇರಿತು.
ಹಿರಿಯರಾದ ನಿಂಗಪ್ಪ ಅರಕೇರಿ, ಹೊಳಬಸಯ್ಯ ಹಿರೇಮಠ, ಈರಪ್ಪ ಅರಕೇರಿ, ಯಲ್ಲಪ್ಪ ಅರಕೇರಿ, ರಾಮಚಂದ್ರ ಬಡಿಗೇರ, ರಮೇಶ ಅರಕೇರಿ, ನಿಂಗಪ್ಪ ಕೊಕ್ಕನವರ, ಗಂಗಪ್ಪ ಅರಕೇರಿ ಇತರರಿದ್ದರು.