ಹುನಗುಂದ ತಹಸೀಲ್ದಾರ ಕಚೇರಿಯಲ್ಲಿ ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರ ಡಾ. ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು. ಬಾಲನಗೌಡ ಬಾಲರಡ್ಡಿ, ಮಲ್ಲನಗೌಡ ಪಾಟೀಲ, ಸೋಮಶೇಖರ ಪೈಲ, ಮಹಾಂತೇಶ ಪರೂತಿ, ಸಂಗಯ್ಯ ಹಿರೇಮಠ, ಬಿ.ವಿ. ನವಛದ್ರ ಇದ್ದರು.
- ನವ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
- ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಮೂಲಕ ಮನವಿ
- ಕಾರ್ಖಾನೆ ಮಾಲೀಕರು ಬೆಳೆಗಾರರ ಬಗ್ಗೆ ಕಾಳಜಿ ಹೊಂದಿಲ್ಲ
ಹುನಗುಂದ: ಮಹಾರಾಷ್ಟ್ರ ಹಾಗೂ ಗುಜರಾತ್ ಮಾದರಿಯಲ್ಲಿ ಪ್ರತಿ ಟನ್‌ಗೆ 3500 ರೂ. ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘವು ತಹಸೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡ ಮಲ್ಲಣ್ಣ ತುಂಬದ ಮಾತನಾಡಿ, ಈಗಾಗಲೇ ನೆರೆಯ ರಾಜ್ಯ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಪ್ರತಿ ಟನ್ ಕಬ್ಬಿಗೆ 3500 ರೂ. ಹೆಚ್ಚಿನ ಬೆಲೆ ನೀಡುತ್ತಿದ್ದು. ನಮ್ಮ ರಾಜ್ಯದಲ್ಲಿಯೂ ಅದೇ ಮಾದರಿ 3500 ರೂ. ಬೆಲೆ ನಿಗದಿ ಮಾಡಬೇಕು. ಕಾರ್ಖಾನೆ ಮಾಲೀಕರು ಬೆಳೆಗಾರರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಗಳು ಆರ್ಥಿಕವಾಗಿ ಅನುಕೂಲವಾಗಿದ್ದಾರೆ. ಸಕ್ಕರೆ, ಎಥೆನಾಲ್, ಲಿಕ್ಕರ್, ಬೆಲ್ಲ, ವಿದ್ಯುತ್ ಸೇರಿ ಉಪ ಉತ್ಪನ್ನಗಳಿಂದ ಸಾಕಷ್ಟು ಲಾಭಗಳಿಸಿದ್ದಾರೆ. ಆದರೂ ಸರ್ಕಾರ, ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಬೆಲೆ ನಿಗದಿಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಾಲನಗೌಡ ಬಾಲರಡ್ಡಿ, ಮಲ್ಲನಗೌಡ ಪಾಟೀಲ, ಸೋಮಶೇಖರ ಪೈಲ, ಮಹಾಂತೇಶ ಪರೂತಿ, ಸಂಗಯ್ಯ ಹಿರೇಮಠ, ಬಿ.ವಿ. ನವಛದ್ರ, ಸೋಮು ಸಜ್ಜನ, ಪರಪ್ಪ ತಾರಿವಾಳ, ರಜಾಕ ಧನ್ನೂರ ಇದ್ದರು.