ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ ನಗರದ ಕಟ್ಟಿಗೆ ಅಡ್ಡೆಯಲ್ಲಿ ಕಟ್ಟಿಗೆ ತೂಕ ಮಾಡುತ್ತಿರುವ ಜನರು.
- ರಬಕವಿ-ಬನಹಟ್ಟಿ ನಗರ
- ಕಟ್ಟಿಗೆ ವ್ಯಾಪಾರದಲ್ಲಿ ಚೇತರಿಕೆ
ರಬಕವಿ/ ಬನಹಟ್ಟಿ: ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದ ಪೆಟ್ರೋಲಿಯಂ ಅವಲಂಬಿತ ಕಾರ್ಯಗಳಿಗೆ ಗ್ಯಾಸ್ ಕೊರತೆಯಾಗಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ರಬಕವಿ-ಬನಹಟ್ಟಿ ನಗರಗಳ ಕಟ್ಟಿಗೆ ಅಡ್ಡೆಗಳಲ್ಲಿ ಕಟ್ಟಿಗೆ ವ್ಯಾಪಾರ ಚೇತರಿಕೆ ಕಂಡಿದೆ.
ಅವಳಿ ನಗರಗಳಲ್ಲಿ ಅನೇಕ ಕುಟುಂಬಗಳು ಮಧ್ಯಮ ವರ್ಗದಲ್ಲಿ ಬದುಕು ಸಾಗಿಸುವವರಾಗಿದ್ದಾರೆ. ನೇಕಾರಿಕೆ ಪ್ರದೇಶವಾಗಿದ್ದರಿಂದ ಈಗಲೂ ಗ್ರಾಮೀಣ ಸೊಗಡಿನ ಸಂಪ್ರದಾಯದಲ್ಲಿದ್ದು, ಗ್ಯಾಸ್ ಇಲ್ಲದ ಸಂದರ್ಭದಲ್ಲಿ ಕಟ್ಟಿಗೆ ಬಳಸುವ ವಿಧಾನದ ಒಲೆಗಳನ್ನು ಪ್ರತಿಮನೆಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ಯಾಸ್ ದೊರಕುವುದಿಲ್ಲ ಎಂಬ ಸುದ್ದಿ ತಿಳಿದ ತಕ್ಷಣ ಇದ್ದ ಗ್ಯಾಸ್‌ನ್ನು ಹೆಚ್ಚು ದಿನ ಬರುವಂತೆ ಮಾಡುವವರೂ ಸಹ ಕಟ್ಟಿಗೆ ಬಳಸಿ ನಿತ್ಯದ ತಮ್ಮ ಆಹಾರ ಪದಾರ್ಥಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಮರ್ಷಿಯಲ್ ಗ್ಯಾಸ್‌ಗಳ ಕೊರತೆ ಇದೆ ಎಂದು ಹೇಳುತ್ತಿರುವ ಕೆಲವು ಹೋಟೆಲ್ ಮಾಲೀಕರೂ ಸಹ ಕಟ್ಟಿಗೆ ಅಡ್ಡೆಗಳತ್ತ ಬಂದು ಖರೀದಿಸುತ್ತಿದ್ದಾರೆ. ನಿತ್ಯ ಸ್ನಾನಕ್ಕೆ ನೀರು ಕಾಯಿಸಿಕೊಳ್ಳುವುದರಿಂದ ಪ್ರಾರಂಭವಾಗಿ ಕೆಲವು ಆಹಾರ ಪದಾರ್ಥಗಳನ್ನು ನಾವು ನಿತ್ಯ ಕಟ್ಟಿಗೆಯನ್ನೇ ಬಳಕೆ ಮಾಡುತ್ತಿದ್ದೇವೆ. ಗ್ಯಾಸ್ ಸರಾಗವಾಗಿ ದೊರಕಿದ ಮೇಲೆ ಕಟ್ಟಿಗೆ ಬಳಸುವುದಿಲ್ಲ ಎಂದು ಕಟ್ಟಿಗೆ ಬಳಕೆದಾರ ಸಂಜಯ ಕೊಂಗನಗುತ್ತಿ ಹೇಳುತ್ತಾರೆ.
ಕಟ್ಟಿಗೆ ಬೇಡಿಕೆ ಈ ಮೊದಲಿಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ದರದಲ್ಲಿ ನಾವು ಯಾವುದೇ ಬದಲಾವಣೆ ಮಾಡಿಲ್ಲ. ಈಗ ಪ್ರತಿ ಕೆ.ಜಿ. ಗೆ ರೂ. 6 ಇದ್ದು, ತೀವ್ರ ಬೇಡಿಕೆ ಹೆಚ್ಚಾದರೆ ದರದಲ್ಲೂ ಹೆಚ್ಚು ಮಾಡುವ ಯೋಚನೆ ಮಾಡುತ್ತೇವೆ ಎಂದು ಕಟ್ಟಿಗೆ ಮಾರಾಟಗಾರ ಸಂಜಯ ಲೋನಾರ್ ಹೇಳಿದ್ದಾರೆ.