ಬಂಡಿಗಣಿ ಶ್ರೀಗಳು 
ಬಾಗಲಕೋಟೆ

ಬಂಡಿಗಣಿ ಶ್ರೀಗಳ ಸಾವಿನ ಪ್ರಕರಣಕ್ಕೆ ಮತ್ತಷ್ಟು ತಿರುವು

ಪ್ರಮುಖ ಮುಖ್ಯಾಂಶಗಳು

  • ತನಿಖಾ ಆದೇಶ ಪಾಲನೆಗೆ ವಿಳಂಬ
  • ಕಾರಣ ಕೇಳಿದ ನ್ಯಾಯಾಲಯ
  • ಸೆ. 17ಕ್ಕೆ ವಿಚಾರಣೆ
ರಬಕವಿ-ಬನಹಟ್ಟಿ : ತಾಲೂಕಿನ ಬಂಡಿಗಣಿ ಶ್ರೀಗಳ ಸಾವಿಗೆ ಸಂಬಂಧಿಸಿದಂತೆ ಕುಟುಂಬಸ್ಥರು ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ಫಿರ್ಯಾದಿ ಪ್ರಕರಣ ಇದೀಗ ಮತ್ತಷ್ಟು ಮಹತ್ವ ಪಡೆದಿದೆ.
ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ನಿಗದಿತ ಅವಧಿಯಲ್ಲಿ ಪಾಲಿಸದ ಹಿನ್ನೆಲೆಯಲ್ಲಿ, ವಿಳಂಬಕ್ಕೆ ಕಾರಣವೇನು? ಎಂಬುದನ್ನು ತಿಳಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣ ಸಂಖ್ಯೆ 9/26ಕ್ಕೆ ಸಂಬಂಧಿಸಿದಂತೆ ಜೂ. 29, 2026ರಂದು ನ್ಯಾಯಾಲಯವು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಸಿಪಿಐಗೆ ನಿರ್ದೇಶನ ನೀಡಿತ್ತು. ಸೆ. 3ರೊಳಗೆ ವರದಿ ಸಲ್ಲಿಸಬೇಕಾಗಿದ್ದರೂ ಅದು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ವಿಳಂಬಕ್ಕೆ ಸೂಕ್ತ ಕಾರಣ ನೀಡಲು ಏಳು ದಿನಗಳ ಗಡುವು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕುಟುಂಬಸ್ಥರಿಂದ ಗಂಭೀರ ಆರೋಪ

ಕುಟುಂಬಸ್ಥರ ದೂರಿನ ಪ್ರಕಾರ, ಬಂಡಿಗಣಿ ಶ್ರೀಗಳು ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯದೆ ಮಠದಲ್ಲಿಯೇ ಕೆಲವರ ವಶದಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ಅವಧಿಯಲ್ಲಿ ಶ್ರೀಗಳ ಆರೋಗ್ಯದ ಕುರಿತು ಕುಟುಂಬಸ್ಥರು ಹಾಗೂ ಭಕ್ತರಿಗೆ ಸಮರ್ಪಕ ಮಾಹಿತಿ ನೀಡಲಾಗಲಿಲ್ಲ ಮತ್ತು ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.
ಇದರೊಂದಿಗೆ, ಶ್ರೀಗಳ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ ಮತ್ಯುಪತ್ರ ಸಷ್ಟಿಸಲಾಗಿದೆ ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.
ಅಥಣಿ ತಾಲೂಕಿನ ಸವದಿ ಗ್ರಾಮದ ಸಂಘವೊಂದರ ಹೆಸರಿನಲ್ಲಿ ಆಸ್ತಿ ಸಂಬಂಧಿತ ದಾಖಲೆ ಸಷ್ಟಿಸಲಾಗಿದೆ ಎಂದು ಆರೋಪಿಸಿ, ಶ್ರೀಗಳ ಪುತ್ರ ಶಿವಕುಮಾರ ಸೇರಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದಲ್ಲಿ 19 ಮಂದಿಯ ವಿರುದ್ಧ ಆರೋಪ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತನಿಖೆಯತ್ತ ನ್ಯಾಯಾಲಯದ ಗಮನ

ನ್ಯಾಯಾಲಯದ ಆದೇಶದಂತೆ ತನಿಖೆ ಯಾವ ಹಂತದಲ್ಲಿದೆ? ನಿಗದಿತ ಅವಧಿಯಲ್ಲಿ ವರದಿ ಏಕೆ ಸಲ್ಲಿಕೆಯಾಗಿಲ್ಲ? ಮತ್ತು ದೂರಿನಲ್ಲಿ ಮಾಡಿರುವ ಆರೋಪಗಳ ಕುರಿತು ಪೊಲೀಸರು ಕೈಗೊಂಡಿರುವ ಕ್ರಮಗಳೇನು? ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ಸೆ. 17ರಂದು ನಡೆಯಲಿರುವ ವಿಚಾರಣೆ ಕುತೂಹಲ ಮೂಡಿಸಿದೆ. ಅಂದು ತನಿಖಾ ಆದೇಶದ ಅನುಷ್ಠಾನ, ವರದಿ ಸಲ್ಲಿಕೆಯ ಸ್ಥಿತಿ ಹಾಗೂ ಮುಂದಿನ ಕಾನೂನು ಕ್ರಮಗಳ ಕುರಿತು ನ್ಯಾಯಾಲಯದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ಬಂಡಿಗಣಿ ಶ್ರೀಗಳು ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಕ್ತರನ್ನು ಹೊಂದಿದ್ದು, ತ್ರಿವಿಧ ದಾಸೋಹ ಹಾಗೂ ಅನ್ನ ದಾಸೋಹದ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು ಎಂದು ಕುಟುಂಬಸ್ಥರು ಮತ್ತು ಭಕ್ತರು ತಿಳಿಸಿದ್ದಾರೆ. ರಾಜ್ಯೋತ್ಸವ ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದಿದ್ದರೆಂಬ ಮಾಹಿತಿಯನ್ನೂ ಅವರು ಉಲ್ಲೇಖಿಸಿದ್ದಾರೆ.