ಹುನಗುಂದ ನಗರದಲ್ಲಿ ಡೀಸೆಲ್ ಸಿಗದೆ ಪೆಟ್ರೋಲ್ ಬಂಕ್ ಮುಂದೆ ಟ್ರ್ಯಾಕ್ಟರ್‌ಗಳೊಂದಿಗೆ ರೈತರು ಕಾಯುತ್ತಿರುವುದು.
- ವಾಹನ ಸವಾರರಿಗೆ ಸಂಕಷ್ಟ
- ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ
- ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ
ಹುನಗುಂದ: ನಗರದಲ್ಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಉಂಟಾಗಿ ಸಾರ್ವಜನಿಕರು ಹಾಗೂ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಗರದಲ್ಲಿರುವ ಮೂರು ಬಂಕ್‌ಗಳಲ್ಲಿ ಮೂರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿಲ್ಲ ಎಂಬ ಲಕ ಹಾಕಲಾಗಿದ್ದು, ಒಂದೇ ಬಂಕ್‌ನಲ್ಲಿ ಮಾತ್ರ ಇಂಧನ ದೊರೆಯುತ್ತಿದೆ. ಇದರ ಪರಿಣಾಮವಾಗಿ ಆ ಬಂಕ್ ಮುಂದೆ ವಾಹನಗಳ ದೀರ್ಘ ಸಾಲು ಕಂಡುಬಂದಿದ್ದು, ಜನರು ಇಂಧನಕ್ಕಾಗಿ ಮುಗಿಬಿದ್ದಿದ್ದಾರೆ.
ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆ ಕಷಿ ಚಟುವಟಿಕೆಗಳು ವೇಗ ಪಡೆಯುತ್ತಿರುವ ಸಮಯದಲ್ಲಿ ಡೀಸೆಲ್ ಕೊರತೆ ರೈತರಿಗೆ ದೊಡ್ಡ ಹೊಡೆತವಾಗಿದೆ. ಟ್ರಾಕ್ಟರ್ ಮಾಲೀಕರು ಜಮೀನು ಸಿದ್ಧತೆ ಮತ್ತು ಬಿತ್ತನೆ ಕಾರ್ಯಗಳಿಗೆ ಅಗತ್ಯವಿರುವ ಡೀಸೆಲ್ ಸಿಗದೆ ಕ್ಯಾನ್‌ಗಳನ್ನು ಹಿಡಿದು ಬಂಕ್‌ಗಳಿಗೆ ಅಲೆದಾಡುತ್ತಿದ್ದಾರೆ.
ಇಂಧನ ಕಂಪನಿಗಳಿಂದ ಸರಿಯಾದ ಪೂರೈಕೆ ಆಗದಿರುವುದರಿಂದ ಟ್ಯಾಂಕರ್‌ಗಳು ಸಮಯಕ್ಕೆ ಬರುತ್ತಿಲ್ಲ. ಇದರಿಂದ ಗ್ರಾಹಕರಿಗೆ ಸೇವೆ ನೀಡುವುದು ಕಷ್ಟವಾಗಿದೆ ಎಂದು ಬಂಕ್ ಮಾಲೀಕರು ತಿಳಿಸಿದ್ದಾರೆ.