ಬಾಗಲಕೋಟೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ದಿ. ಎಚ್.ವೈ. ಮೇಟಿ ಅಭಿಮಾನಿ ಸಂಘದ ಮುಖಂಡ ಮಲ್ಲಿಕಾರ್ಜುನ ಮೇಟಿ ಮಾತನಾಡಿದರು. ಸಂಘದ ಮುಖಂಡರು ಇತರರಿದ್ದರು.
- ಸಿಎಂ ಸಿದ್ದರಾಮಯ್ಯ, ದಿ. ಎಚ್.ವೈ. ಮೇಟಿ ಅಭಿಮಾನಿ ಸಂಘ ಘೋಷಣೆ
- ಸೋಗಿನ ಬಂಡಿ, ಬಣ್ಣದ ಬಂಡಿಗಳಿಗೆ ಬಹುಮಾನ
- ನಗರದಲ್ಲಿ 10 ಕಡೆಗೆ ಕೌಂಟರ್‌ಗಳ ವ್ಯವಸ್ಥೆ
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಹಾಗೂ ದಿ. ಎಚ್.ವೈ. ಮೇಟಿ ಅಭಿಮಾನಿಗಳ ಬಳಗದಿಂದ ಈ ವರ್ಷ ಬಾಗಲಕೋಟೆ ನಗರದ ಹೋಳಿ ಹಬ್ಬದಲ್ಲಿ ಕುಡಿಯಲು ಉಚಿತ ನೀರು ಹಾಗೂ ಓಕುಳಿ ಆಡಲು ಉಚಿತ ಬಣ್ಣವನ್ನು ವಿತರಿಸಲು ಮುಂದಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಎಚ್.ವೈ. ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಮೇಟಿ ಅವರು, ಪ್ರಸಿದ್ಧ ಬಾಗಲಕೋಟೆ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಣ್ಣದ ಬಂಡಿ ಹಾಗೂ ಸೋಗಿನ ಬಂಡಿಗಳಿಗೂ ನಗದು ಬಹುಮಾನ ವಿತರಿಸಲಾಗುವುದು ಎಂದು ಘೋಷಿಸಿದರು.
ಸೋಗಿನ ಬಂಡಿಯವರಿಗೆ ಪ್ರಥಮ 25 ಸಾವಿರ ರೂ., ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಗುವುದು. ಹಾಗೆಯೆ ಅತಿ ಹೆಚ್ಚು ಬಣ್ಣದ ಬಂಡಿಗಳನ್ನು ತರುವ ಓಣಿಗಳಿಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ಹಾಗೂ ತೃತೀಯ 5 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದರು.
ದಿವಂಗತ ಎಚ್.ವೈ. ಮೇಟಿ ಅವರು ಹೋಳಿ ಹಬ್ಬದ ಸಂಸ್ಕೃತಿ ಉಳಿಸಿ, ಬೆಳೆಸುವ ಕಾಳಜಿಯಿಂದ ಪ್ರತಿ ವರ್ಷ ಹೋಳಿ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿ, ಅದ್ದೂರಿಯಾಗಿ ಆಚರಿಸುವ ಮೂಲಕ ಎಲ್ಲರನ್ನು ಹಬ್ಬದಲ್ಲಿ ಪಾಲ್ಗೊಳ್ಳುವಂತೆ ತಿಳಿಸುತ್ತಿದ್ದರು. ಅವರ ಆಶಯದಂತೆ ಈ ವರ್ಷವೂ ಯುವ ಜನತೆಯನ್ನು ಹೋಳಿ ಹಬ್ಬದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ಹೋಳಿ ಹಬ್ಬದ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದ್ದು, ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರ ಭಾಗಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಒಟ್ಟು 10 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಅಲ್ಲೆಲ್ಲ ಅರವಟಿಗೆಗಳ ಮೂಲಕ ಶುದ್ಧ ಕುಡಿಯುವ ನೀರು ಹಾಗೂ ಉಚಿತವಾಗಿ ಬಣ್ಣಗಳನ್ನು ವಿತರಣೆ ಮಾಡಲಾಗುವುದು. ಕಿಲ್ಲಾ ಪ್ರದೇಶ, ಬಸವೇಶ್ವರ ವೃತ್ತ, ವಿದ್ಯಾಗಿರಿ ವೃತ್ತ, ಇಂಜಿನಿಯರಿAಗ್ ಕಾಲೇಜ್ ವೃತ್ತ, ಜಿಲ್ಲಾ ಆಸ್ಪತ್ರೆ ಸರ್ಕಲ್ ಬಳಿ ಸೇರಿ ವಿವಿಧ ಸ್ಥಳಗಳಲ್ಲಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಸ್ಥಳೀಯ ಯುವಕರು ಊರು ಬಿಟ್ಟು ತೆರಳದೆ ಊರಲ್ಲೇ ಉತ್ಸಾಹದಿಂದ ಹೋಳಿ ಹಬ್ಬ ಆಚರಿಸಬೇಕು. ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಗೆ ಸಹಕರಿಸಬೇಕು. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಣ್ಣದಾಟ ನಡೆಸುವಂತೆ ಮನವಿ ಮಾಡಿದರು.
ಆನಂದ ದೇಸಾಯಿ, ಸಂಜೀವ ವಾಡ್ಕರ್, ಶಿವಕುಮಾರ ನಂದಿಕೋಲಮಠ ಮತ್ತಿತರರು ಇದ್ದರು.
ಕುಟುಂಬದಲ್ಲಿ ಗೊಂದಲವಿಲ್ಲ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವಿಷಯದಲ್ಲಿ ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖಂಡ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದು, ಪಕ್ಷದ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ. ನಮ್ಮ ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ತೀರ್ಮಾನದಂತೆ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರ ನೇತೃತ್ವದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೇವೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ ಎಂದರು.