ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮರಾವತಿಯಲ್ಲಿ 220/110 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಎಸ್ಪಿ ಸಿದ್ಧಾರ್ಥ ಗೋಯಲ್, ಬಾಗಲಕೋಟೆ ವಿದ್ಯುಚ್ಛಕ್ತಿ ಪ್ರಸರಣ ವಲಯದ ಮುಖ್ಯ ಅಭಿಯಂತರ ಬಸವರಾಜ ಎಸ್.ಎಚ್., ವಿದ್ಯುಚ್ಛಕ್ತಿ ಪ್ರಸರಣ ವಲಯದ ಅಧೀಕ್ಷಕ ಅಭಿಯಂತರ ರಮೇಶ ಪವಾರ ಇತರರಿದ್ದರು. 
ಬಾಗಲಕೋಟೆ

ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ಶಿಲಾನ್ಯಾಸ

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ

ಅಮರಾವತಿಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣದಿಂದ ಮರೋಳ, ಕೊಪ್ಪಳ ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಯೋಜನೆಗಳಿಗೆ ಅಗತ್ಯ ಇರುವ ವಿದ್ಯುತ್‌ನ್ನು ಅಡಚಣೆ ಇಲ್ಲದೇ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 147 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 220/110 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಕಳೆದ ಮೂರು ವಷÀðಗಳ ಸತತ ಪ್ರಯತ್ನದ ಫಲವಾಗಿ ಅಮರಾವತಿಯಲ್ಲಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪನೆಗೆ ಮಂಜೂರಾತಿ ದೊರೆತಿದ್ದು, 20 ಎಕರೆ ಜಮೀನಿನಲ್ಲಿ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ತಾಲೂಕಿನ ಕುಣಬೆಂಚಿ, ಚಿಕ್ಕಮಾಗಿ ಹಾಗೂ ಮರೋಳ ಗ್ರಾಮಗಳಲ್ಲಿ ಹೊಸದಾಗಿ 110 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸುವಂತೆ ಸಹ ಮನವಿ ಮಾಡಲಾಗಿತ್ತು. ಸದ್ಯ ಕುಣಬೆಂಚಿಯಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಕಾಮಗಾರಿಗೆ ಅಗತ್ಯವಿರುವ 5 ಎಕರೆ ಜಮೀನನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಸದ್ಯದಲ್ಲಿಯೇ ಇದಕ್ಕೂ ಸಹ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಹೆಸ್ಕಾಂ ಉಪ ವಿಭಾಗೀಯ ಕಚೇರಿ ಸ್ಥಾಪನೆಗೆ ಕ್ರಮ

ಹುನಗುಂದ ತಾಲೂಕಿನಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಕೃಷಿ ಪಂಪಸೆಟ್‌ಗಳು ಹಾಗೂ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ಹೆಸ್ಕಾಂ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹುನಗುಂದದಲ್ಲಿ ಹೆಸ್ಕಾಂ ಉಪ ವಿಭಾಗೀಯ ಕಚೇರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು. ಇದರಿಂದ ವಿದ್ಯುತ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ರೈತರು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲವಾಗಲಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.

ಬಾಗಲಕೋಟೆ ವಿದ್ಯುಚ್ಛಕ್ತಿ ಪ್ರಸರಣ ವಲಯದ ಮುಖ್ಯ ಅಭಿಯಂತರ ಬಸವರಾಜ ಎಸ್.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಹುನಗುಂದ ತಾಲೂಕು ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಮುತ್ತಣ್ಣ ಕಲ್ಗುಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ವಿದ್ಯುಚ್ಛಕ್ತಿ ಪ್ರಸರಣ ವಲಯದ ಅಧೀಕ್ಷಕ ಅಭಿಯಂತರ ರಮೇಶ ಪವಾರ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭುಸಿಂಗ್ ಹಜಾರೆ, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿ.ಬಿ. ಯಂಕಂಚಿ ಇತರರಿದ್ದರು.