ಕಮತಗಿ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ 2026-27ನೇ ಸಾಲಿನ ಉಳಿತಾಯ ಬಜೆಟ್ ಮಂಡನಾ ಸಭೆಯಲ್ಲಿ ಪಪಂ ಅಧ್ಯಕ್ಷ ಬಸವರಾಜ ಕುಂಬಳಾವತಿ ಮಾತನಾಡಿದರು. ಉಪಾಧ್ಯಕ್ಷ ನೇತ್ರಾವತಿ ನಿಂಬಲಗುಂದಿ, ಸದಸ್ಯರಾದ ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ಚಂದಪ್ಪ ಕುರಿ, ಪ್ರಕಾಶ ಶಿನ್ನೂರ, ಗುರುಲಿಂಗಪ್ಪ ಪಾಟೀಲ, ಹುಚ್ಚವ್ವ ಹಗೇದಾಳ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ಮುಖ್ಯಾಕಾರಿ ಎಫ್.ಎನ್. ಹುಲ್ಲಿಕೇರಿ ಇತರರಿದ್ದರು.
- ಅಧ್ಯಕ್ಷ ಬಸವರಾಜ ಕುಂಬಳಾವತಿ ಮಾಹಿತಿ
- 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ
ಕಮತಗಿ: ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಳಾವತಿ ಅವರು, ರೂ. 17.91 ಕೋಟಿ ಅಂದಾಜು ಆದಾಯ ಹಾಗೂ ರೂ. 17.86 ಕೋಟಿ ಅಂದಾಜು ವೆಚ್ಚದೊಂದಿಗೆ ರೂ. 4.50 ಲಕ್ಷ ಉಳಿತಾಯ ನಿರೀಕ್ಷೆಯ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ಜ. 8ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಪಡೆದ ಸಲಹೆಸೂಚನೆಗಳನ್ನು ಪರಿಗಣಿಸಿ ಬಜೆಟ್ ಸಿದ್ಧಪಡಿಸಲಾಗಿದೆ. ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಬೀದಿ ದೀಪಗಳ ವ್ಯವಸ್ಥೆ, ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವನ್ನು ವೈಜ್ಞಾನಿಕ ವಿಲೇವಾರಿ ಮಾಡಲು ಅಗತ್ಯ ಯಂತ್ರೋಪಕರಣಗಳ ಅಳವಡಿಕೆಗೆ ಅನುದಾನ ನಿರೀಕ್ಷಿಸಲಾಗಿದೆ. ಪಟ್ಟಣ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದರು.
ಹಿಂದಿನ ಸಭೆಯಲ್ಲಿ ಪ್ರಾರಂಭಗೊಂಡ ನಗರೋತ್ಥಾನ ಕಾಮಗಾರಿಗಳಲ್ಲಿ ಕೆಲವು ಪೂರ್ಣಗೊಂಡಿದ್ದರೂ, ಇನ್ನೂ ಕೆಲವು ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಅವುಗಳನ್ನು ತ್ವರಿತವಾಗಿ ಆರಂಭಿಸುವಂತೆ ಒತ್ತಾಯಿಸಿದರು.
ಸೆಪ್ಟೆಂಬರ್ 2025ರಿಂದ ಜನವರಿ 2026ರವರೆಗೆ ಜಮಾಖರ್ಚಿನ ವಿವರಗಳು, ಸ್ವಚ್ಛ ಭಾರತ ಅಭಿಯಾನ ಅನುದಾನ, ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಯ ಪಾಲಿನ ರೂ. 1.31 ಲಕ್ಷ ಠೇವಣಿ, ಸರ್ಕಾರದ ಆದೇಶದಂತೆ ಮನೆ ಮತ್ತು ವಾಣಿಜ್ಯ ಕಟ್ಟಡಗಳ ತೆರಿಗೆ ಹೆಚ್ಚಳ ಸೇರಿ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.
ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಸದಸ್ಯರಾದ ರಮೇಶ ಜಮಖಂಡಿ, ದೇವಿಪ್ರಸಾದ ನಿಂಬಲಗುಂದಿ, ಚಂದಪ್ಪ ಕುರಿ, ಪ್ರಕಾಶ ಶಿನ್ನೂರ, ಗುರುಲಿಂಗಪ್ಪ ಪಾಟೀಲ, ಲಕ್ಷ್ಮಣ ಮಾದರ, ಹುಚ್ಚವ್ವ ಹಗೇದಾಳ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ಮಂಜುಳಾ ಮುರಾಳ, ಬಸವರಾಜ ದಂಡಾವತಿ, ಮಂಜುನಾಥ ವಡವಡಗಿ, ಸಂಗಪ್ಪ ಮೇದಾರ, ಮುಖ್ಯಾಕಾರಿ ಎಫ್.ಎನ್. ಹುಲ್ಲಿಕೇರಿ ಸಿಬ್ಬಂದಿ ರಮೇಶ ಪದಕಿ ಮತ್ತಿತರರು ಉಪಸ್ಥಿತರಿದ್ದರು.