ಮಹಾಲಿಂಗಪುರದ ಜಂಗಮ ಸಮಾಜದ ಕಾರ್ಯಾಲಯದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಗುರುಪಾದಯ್ಯ ಚಟ್ಟಿಮಠ, ಮಹಾಂತೇಶ ಹಿಟ್ಟಿನಮಠ, ವಿರುಪಾಕ್ಷಯ್ಯ ಪಂಚಕಟ್ಟಿಮಠ ಮತ್ತಿತರರಿದ್ದರು. 
ಬಾಗಲಕೋಟೆ

ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಪ್ರಥಮ ಆದ್ಯತೆ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಭರವಸೆ
  • ರೇಣುಕಾಚಾರ್ಯ ಸಮುದಾಯ ಭವನಕ್ಕೆ ಕೋಟಿ ರೂ.
  • ತೇರದಾಳ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಹಕಾರ
ಮಹಾಲಿಂಗಪುರ : ತೇರದಾಳ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಹಕಾರದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಪಟ್ಟಣದ ಸಮಾಜದ ಕಾರ್ಯಾಲಯದಲ್ಲಿ ಶ್ರೀ ರೇಣುಕಾಚಾರ್ಯ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ 1 ಕೋಟಿ ರೂ. ಅನುದಾನ ಮಂಜೂರಾದ ಹಿನ್ನೆಲೆಯಲ್ಲಿ ಜಂಗಮ ಸಮಾಜದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿನ ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿದ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು. ಅನುದಾನ ಮಂಜೂರಾಗಿರುವುದು ಸಂತಸದ ವಿಚಾರವಾಗಿದ್ದು, ಜಂಗಮ ಸಮಾಜದ ಹಿರಿಯರು ಹಾಗೂ ಯುವಕರ ಬೆಂಬಲ ಸದಾ ಕಾಂಗ್ರೆಸ್ ಪಕ್ಷದ ಮೇಲಿರಲಿ ಎಂದು ಅವರು ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ, ರೇಣುಕಾಚಾರ್ಯ ಸಮುದಾಯ ಭವನ ಕಾಮಗಾರಿಗಾಗಿ ಮಂಜೂರಾದ ಅನುದಾನದಲ್ಲಿ ಮೊದಲ ಹಂತದಲ್ಲಿ 25 ಲಕ್ಷ ರೂ.ಗಳನ್ನು ಸಮಾಜದ ಖಾತೆಗೆ ಜಮಾ ಮಾಡಲಾಗಿದೆ. ಈ ಅನುದಾನಕ್ಕೆ ಸಿದ್ದು ಕೊಣ್ಣೂರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಶ್ರಮ ಶ್ಲಾಘನೀಯ ಎಂದರು.
ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಛಟ್ಟಿಮಠ, ಮಹಾಂತೇಶ ಹಿಟ್ಟಿನಮಠ, ವಿರುಪಾಕ್ಷಯ್ಯ ಪಂಚಕಟ್ಟಿಮಠ, ಬಸಯ್ಯ ಛಟ್ಟಿಮಠ, ಜಿ.ಎಸ್. ಮಠಪತಿ, ಬಿ.ಎಂ. ಅಯ್ಯನಗೌಡರ, ಮಹಾಂತೇಶ ಮನ್ನಯ್ಯನವರಮಠ, ಎಸ್.ಟಿ. ಮಠಪತಿ, ನ್ಯಾಯವಾದಿ ಎಂ.ಎಸ್. ಮನ್ನಯ್ಯನವರಮಠ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ, ಮತ್ತಿತರರಿದ್ದರು.