ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಮೊದಲ ಹಂತದ ತಪಾಸಣೆ ಕುರಿತು ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಇತರರಿದ್ದರು.
ಬಾಗಲಕೋಟೆ: ಮುಂಬರುವ ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿ. 1ರಿಂದ ವಿದ್ಯುನ್ಮಾನ ಮತ ಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಪ್ರಥಮ ಹಂತದ ತಪಾಸಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ತಪಾಸಣೆ ಕುರಿತು ನಡೆದ ವಿವಿಧ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರು, ಪ್ರತಿನಿಧಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಇವಿಎಂ, ವಿವಿ ಪ್ಯಾಟ್‌ಗಳ ಪ್ರಥಮ ಹಂತದ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಕಾರ್ಯಕ್ಕೆ ವೇರ್‌ಹೌಸ್‌ನ ಸ್ವಚ್ಛತಾ ಕಾರ್ಯ, ಟೇಬಲ್‌ಗಳ ವ್ಯವಸ್ಥೆ ಮಾಡಿ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮತ ಯಂತ್ರಗಳ ಪರಿಶೀಲನೆ ಕಾರ್ಯ ವೀಕ್ಷಿಸಲು ಬರುವ ವಿವಿಧ ಪಕ್ಷದ ಪ್ರತಿನಿಧಿಗಳಿಗೆ ಮುಂಚಿತವಾಗಿ ಗುರುತಿನ ಚೀಟಿಯನ್ನು ಪೂರೈಸಲಾಗುತ್ತದೆ. ಪರಿಶೀಲನೆ ನಡೆಯುವ ವೇರ್‌ಹೌಸ್‌ನಲ್ಲಿ ಮೊಬೈಲ್ ಹಾಗೂ ಇನ್ನಿತರ ವಿದ್ಯುನ್ಮಾನ ವಸ್ತುಗಳನ್ನು ತರುವುದನ್ನು ಹಾಗೂ ಉಪಯೋಗಿಸುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವೇರ್‌ಹೌಸ್ ಹೊರಗಡೆ ಇರುವ ಕೌಂಟರ್‌ನಲ್ಲಿ ಮೊಬೈಲ್ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇವಿಎಂ, ವಿವಿ ಪ್ಯಾಟ್ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವನ್ನು ಡಿ. 1ರಂದು ಬೆಳಗ್ಗೆ 9 ಗಂಟೆಗೆ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ ಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿನಿಧಿಗಳು ಹಾಜರಿರಬೇಕು. ಈ ಪ್ರಕ್ರಿಯೆ ತಪಾಸಣೆ ಕಾರ್ಯ ಮುಗಿಯುವವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಶ್ರೀನಿವಾಸ ಬಳ್ಳಾರಿ, ಕುತ್ಬುದ್ಧೀನ ಖಾಜಿ, ಎಂ.ಬಿ. ಸಿದ್ದಗೋಣಿ, ಯಲ್ಲಪ್ಪ ಸನಕ್ಯಾನವರ, ಅಭಿಷೇಕ ತಳ್ಳಿಕೇರಿ, ರಮೇಶ ಸನದಿ, ಪ್ರಭು ಹಳ್ಳೂರ, ಶಿವಾನಂದ ಸುರಪುರ, ಪ್ರಭು ರುದ್ರಾಕ್ಷಿ, ನಾಗರಾಜ ಮನ್ನಿಕೇರಿ ಇತರರು ಉಪಸ್ಥಿತರಿದ್ದರು.