ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿರುವ ಹೊರ ಗುತ್ತಿಗೆ ಸಿಬ್ಬಂದಿಯ ಆರೋಗ್ಯವನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ವಿಚಾರಿಸಿದರು. ಇತರೆ ಸಿಬ್ಬಂದಿ, ಕುಟುಂಬದವರು ಇದ್ದರು.
- ಖಾಸಗಿ ಆಸ್ಪತ್ರೆಗೆ ದಾಖಲು
- ಮಾಜಿ ಸಚಿವ ಆನಂದ ನ್ಯಾಮಗೌಡರಿಂದ ಆರೋಗ್ಯ ವಿಚಾರಣೆ
- ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ
ಜಮಖಂಡಿ: ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಯಲ್ಲಿ ನಾಲ್ವರನ್ನು ವಜಾಗೊಳಿಸಿದ ಹಿನ್ನೆಲೆ ಅವರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದ್ದು, ಪೊಲೀಸರು, ಜನತೆ ತಕ್ಷಣ ಅವರನ್ನು ತಡೆದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಸ್ವಸ್ಥಗೊಂಡ ಸಿಬ್ಬಂದಿ ಯಮುನಾ ಗೋರ್ಪಡೆ, ಸುನಂದಾ ಮಠಪತಿ, ವಿಜಯ ಗೋರ್ಪಡೆ, ಹನುಮಂತ ಕಾಂಬಳೆ ಗುಣಮುಖರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಏಜೆನ್ಸಿ ಮೂಲಕ ನೇಮಕವಾಗಿದ್ದ ಅವರನ್ನು ರೋಸ್ಟರ್ ನಿಯಮದ ಪ್ರಕಾರ ವಜಾಗೊಳಿಸಲಾಗಿತ್ತು. ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾಗ, ಸಿಬ್ಬಂದಿ ಆತ್ಮಹತ್ಯೆಗೆ ಮುಂದಾಗಿದ್ದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಯನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ, ನೌಕರರ ಸಮಸ್ಯೆಗೆ ನ್ಯಾಯ ಸಮ್ಮತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.