ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಪ್ರಸಕ್ತ ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಕುರಿತು ಸಭೆ ನಡೆಯಿತು. ಜಿ.ಪಂ. ಸಿಇಒ ಶಶಿಧರ ಕುರೇರ, ಎಡಿಸಿ ಅಶೋಕ ತೇಲಿ ಮತ್ತಿತರರು ಇದ್ದರು. 
ಬಾಗಲಕೋಟೆ

ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಮಾಹಿತಿ
  • ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಸದ್ಯ 38742 ಮೆ.ಟನ್ ರಸಗೊಬ್ಬರ ದಾಸ್ತಾನು
ಬಾಗಲಕೋಟೆ: ಯೂರಿಯಾ ರಸಗೊಬ್ಬರ ಖರೀದಿಗೆ ಇನ್ನು ಮುಂದೆ ರೈತರು ಕಡ್ಡಾಯವಾಗಿ ಎಫ್‌ಐಡಿ ಹೊಂದಿರಬೇಕು. ಅಷ್ಟೇ ಅಲ್ಲ ತಮ್ಮ ಭೂಮಿಯನ್ನು ಸಹ ಎಫ್‌ಐಡಿಗೆ ಜೋಡಿಸಿರಬೇಕು. ಇದರ ಆಧಾರದ ಮೇಲೆ ಯೂರಿಯಾ ರಸಗೊಬ್ಬರವನ್ನು ಕೆ. ಕಿಸಾನ್ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೂರಿಯಾ ರಸಗೊಬ್ಬರ ತಯಾರಿಕೆಗೆ ವಿದೇಶದಿಂದ ಕಚ್ಚಾ ಸಾಮಗ್ರಿ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಯುದ್ಧದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಗ್ರಿ ಆಮದಿನಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇರುವುದರಿಂದ ರಸಗೊಬ್ಬರ ವಿತರಣೆ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ ಎಂದರು.
ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಟೇರ್ ಕ್ಷೇತ್ರ ಬಿತ್ತನೆಗೆ ಗುರಿ ಹೊಂದಲಾಗಿದೆ. ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಅಗತ್ಯ ಪ್ರಮಾಣದ ಬೀಜ ಮತ್ತು ಗೊಬ್ಬರಗಳನ್ನು ಸಂಗ್ರಹಿಸಲಾಗಿದ್ದು, ರಿಯಾಯಿತಿ ದರದಲ್ಲಿ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಸಹಕಾರಿ ಸಂಘಗಳು, ಕೃಷಿ ಇಲಾಖೆ ಕೇಂದ್ರಗಳು ಹಾಗೂ ಖಾಸಗಿ ಮಾರಾಟ ಮಳಿಗೆಗಳ ಮೂಲಕ ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಏಕದಳ, ದ್ವಿದಳ, ಆಹಾರ ಧಾನ್ಯ, ಎಣ್ಣೆ ಕಾಳು ಬೆಳೆಗಳು ಸೇರಿ ಪ್ರಮುಖ ಬೆಳೆಗಳ ಬೀಜಗಳು ಸಮಪರ್ಕಕವಾಗಿ ಲಭ್ಯವಿವೆ ಎಂದು ಹೇಳಿದರು.
ರಸಗೊಬ್ಬರಗಳ ಪೂರೈಕೆಯಲ್ಲಿಯೂ ಯಾವುದೇ ಕೊರತೆ ಇಲ್ಲದಂತೆ ಯೂರಿಯಾ, ಡಿಎಪಿ, ಎನ್‌ಪಿಕೆ ಸೇರಿದಂತೆ ಅಗತ್ಯ ಗೊಬ್ಬರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಯೂರಿಯಾ 13456 ಮೆ.ಟನ್, ಡಿಎಪಿ 5954 ಮೆ.ಟನ್, ಕಾಂಪ್ಲೆಕ್ಸ್ 14202 ಮೆ.ಟನ್, ಎಂ.ಓ.ಪಿ 3183 ಮೆ.ಟನ್, ಎಸ್.ಎಸ್.ಪಿ 1747 ಮೆ.ಟನ್ ಸೇರಿ ಒಟ್ಟು 38742 ಮೆ.ಟನ್ ದಾಸ್ತಾನು ಲಭ್ಯವಿರುವುದಾಗಿ ತಿಳಿಸಿದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಭೇಟಿ ನೀಡಿ ರೈತರಿಗೆ ತಾಂತ್ರಿಕ ಮಾರ್ಗದರ್ಶನ ನೀಡಬೇಕು. ಸಮತೋಲನ ಗೊಬ್ಬರ ಬಳಕೆ ಹಾಗೂ ಶಿಫಾರಸು ಮಾಡಿದ ಬೀಜ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ರೈತರು ಅನಾವಶ್ಯಕವಾಗಿ ಗೊಬ್ಬರ ಸಂಗ್ರಹಿಸದೇ ಅಗತ್ಯವಿರುವಷ್ಟು ಮಾತ್ರ ಪಡೆಯಬೇಕು. ಕಳೆದ ಸಾಲಿನಲ್ಲಿ ರೈತರು ವಿವಿಧ ಬೆಳೆಗಳಿಗೆ ವಿಮೆ ಒಳಪಡಿಸಿದ ಹಾಗೂ ಆ ಪೈಕಿ ಪರಿಹಾರ ವಿತರಣೆ ಮಾಡಲಾದ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಕೃಷಿ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ತಾಲೂಕು ಮಟ್ಟದ ಅಽಕಾರಿಗಳು ಹಾಗೂ ಜಿಲ್ಲೆಯ ವಿವಿಧ ಬೀಜ, ರಸಗೊಬ್ಬರ ಮಾರಾಟಗಾರರ ಪ್ರತಿನಿಽಗಳು ಉಪಸ್ಥಿತರಿದ್ದರು.

ಕಾಳ ಸಂತೆ ನಿಯಂತ್ರಣಕ್ಕೆ ಕ್ರಮ

ರೈತರಿಗೆ ಯೂರಿಯಾ ರಸಗೊಬ್ಬರವನ್ನು ಕೆ. ಕಿಸಾನ್ ತಂತ್ರಾಂಶದ ಮೂಲಕವೇ ವಿತರಣೆ ಮಾಡಲಾಗುತ್ತಿದ್ದು, ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯವಾಗಿದೆ. ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ, ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ಮತ್ತು ರೈತರು ಸಹ ಮಿತವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ.ಕಿಸಾನ್ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.