ಲೋಕಾಪುರ ಪಟ್ಟಣದಲ್ಲಿ ಘಟಪ್ರಬಾ ಬಲದಂಡೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು. 
ಬಾಗಲಕೋಟೆ

ಕಾಲುವೆ ನೀರಿಗೆ ಒತ್ತಾಯಿಸಿ ರೈತರ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
  • ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
  • ಅನ್ಯಾಯ ಸರಿಪಡಿಸಲು ಆಗ್ರಹ
ಲೋಕಾಪುರ:

ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಲೋಕಾಪುರ ಪಟ್ಟಣದಲ್ಲಿ ಶುಕ್ರವಾರ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ಹರಿಹಾಯ್ದ, ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ತಿಮ್ಮಣ್ಣಾ ಹುಲಸದ ಮಾತನಾಡಿ, ರೈತರ ಸಮಸ್ಯೆಗೆ ಸರ್ಕಾರ ಬೇಗನೆ ಸ್ಪಂದಿಸಿ ಶಾಶ್ವತ ಪರಿಹಾರ ಕಂಡು ಹಿಡಿದು, ನಮಗೆ ಸಿಗಬೇಕಾದ ಕಾಲುವೆ ನೀರನ್ನು ಹರಿಸಿ. ಮೊದಲೇ ಬರ ಬಿದ್ದಿದೆ, ಗೋಕಾಕದಿಂದ ಬಿಡುವ ನೀರನ್ನು ನಮ್ಮ ಭಾಗಕ್ಕೆ ಬಿಡಲು ಅಧಿಕಾರಿಗಳು ಮುತುವರ್ಜಿ ವಹಿಸಿ, ಕಾಲುವೆ ದಂಡೆಗೆ ಇರುವ ಮೋಟಾರಗಳನ್ನು ವಶಪಡಿಸಿಕೊಂಡು ನೀರು ಮುಂದಿನ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಆದಷ್ಟು ಬೇಗ ನೀರನ್ನು ಬಿಡಲು ಒತ್ತಾಯಿಸಿದರು.
ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಬಿಸಿಲಿನ ಬೇಗೆಯಿಂದ ಜನ, ಜಾನುವಾರುಗಳು ನೀರಿಲ್ಲದೆ ತತ್ತರಿಸಿ ಹೋಗಿದ್ದು ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು. ಬೋರ್‌ವೆಲ್, ಬಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿದ್ದು, ಪರಿಣಾಮ ದನಕರುಗಳಿಗೆ ನೀರು ಕುಡಿಯಲು ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ 20 ದಿನಗಳವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಬೇಕು. ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪೈಪ್ ಲೈನ್ ಹಾಗೂ ಮೋಟಾರ್‌ಗಳನ್ನು ಸಂಬಂಧಿಸಿದ ರೈತರು ಕೂಡಲೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಮೂಲಕ ತೆರವುಗೊಳಿಸಿ ಮುಂದಿನ ಗ್ರಾಮಗಳಿಗೆ ನೀರು ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ರೈತರಾದ ಗೋವಿಂದಪ್ಪ ನಾಯಕ ಮಾತನಾಡಿ, ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರನ್ನು ಉದ್ದೇಶಿಸಿ ಮಾತನಾಡಿ, ಕಾಲುವೆ ಕೊನೆಯ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ವಿವಿಧಡೆ ಸೋರಿಕೆಯಾಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಈ ಕುರಿತು ನೀರಾವರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಾಮನಗೌಡ ಪಾಟೀಲ, ಯಮನಪ್ಪ ಹೊರಟ್ಟಿ, ಅರ್ಜುನ ಕೊಪ್ಪದ, ಆನಂದಗೌಡ ಪಾಟೀಲ, ಶ್ರೀನಿವಾಸ ಪಾಟೀಲ, ಛಾಯಪ್ಪಗೌಡ ಪಾಟೀಲ, ವಿಠ್ಠಲಪ್ಪ ತುಳಸಿಗೇರಿ, ಯಮನಪ್ಪ ಹೊರಟ್ಟಿ, ತಿಮ್ಮಣ್ಣಾ ತುಳಸಿಗೇರಿ, ಭೀಮನಗೌಡ ಪಾಟೀಲ, ರಾಮಲಿಂಗಪ್ಪ ಕಟ್ಟಿ, ಮುದಕಪ್ಪ ಪೂಜೇರ, ಮುತ್ತು ಹಣಗಲಿ, ಲೋಕಣ್ಣಾ ಉಳ್ಳಾಗಡ್ಡಿ ಇದ್ದರು.

ಹೆದ್ದಾರಿ ಬಂದ್

ಲೋಕಾಪುರದಲ್ಲಿ ನೀರಿಗಾಗಿ ಪ್ರತಿಭಟನೆ ಹಮ್ಮಿಕೊಂಡಾಗ ವಾಹನ ಸವಾರರು ಪರದಾಡಿದರು. ಬೆಳಗಾವಿ-ರಾಯಚೂರ ಹಾಗೂ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಡಾ. ಚಿಕ್ಪಪ್ಪ ನಾಯಕ, ಉಪ ತಹಸೀಲ್ದಾರ ಬಿ.ಎಸ್. ರಂಗಣ್ಣವರ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಮುಧೋಳ ಸಿಪಿಐ ಎಂ.ನಾಗರಡ್ಡಿ, ಪಿಎಸ್‌ಐ ಕೆ.ಬಿ. ಜಕ್ಕನ್ನವರ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಡ್ಯೂಟಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಜೆ.ಕೆ ರೈತರೊಂದಿಗೆ ಸಮಾಲೋಚನೆ ನಡೆಸಿ ನೀರು ಬಿಡಿಸುತ್ತೇವೆ ಅಂತ ಭರವಸೆ ನೀಡಿದ ಬಳಿಕ ಹೋರಾಟ ಹಿಂಪಡೆಯಲಾಯಿತು.
"

ರೈತರಿಗೆ ಪ್ರಾಮಾಣಿಕವಾಗಿ ನೀರು ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ರೈತರ ಸಹಕಾರವೂ ಅತ್ಯಂತ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಡಾ. ಚಿಕ್ಕಪ್ಪ ನಾಯಕ, ತಹಸೀಲ್ದಾರ ಮುಧೋಳ.

"

ಪ್ರಾದೇಶಿಕ ಆಯುಕ್ತರು ಬೆಳಗಾವಿ ಇವರಿಗೆ ಎರಡು ಬಾರಿ ನೀರು ಬಿಡುಗಡೆಗೊಳಿಸಿ ಆದೇಶಿಸಿದ್ದು, ಕುಡಿಯುವ ನೀರಿನ ಅವಶ್ಯಕತೆಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಬಾ ಬಲದಂಡೆ ಕಾಲುವೆಗೆ ಈಗಾಗಲೇ 2400 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
- ಆರ್.ಬಿ. ತಿಮ್ಮಾಪೂರ ಶಾಸಕ