ಜಮಖಂಡಿ ತಾಲೂಕು ಆಡಳಿತ ಸೌಧದ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ್, ಹನಮಂತ ಮಗದುಮ, ಯಲ್ಲಪ್ಪ ಹೆಗಡೆ, ಬಾಹುಬಲಿ ನ್ಯಾಮಗೌಡ, ಕಲ್ಲಪ್ಪ ಬಿರಾದಾರ, ಗುಡುಸಾಬ ಹೊನವಾಡ ಇತರರಿದ್ದರು.
- ಮುಂಗಾರು ಬೆಳೆ ನಷ್ಟಕ್ಕೆ ಪರಿಹಾರ ಘೋಷಣೆ
- ಕೆಇಬಿ ಖಾಸಗೀಕರಣ ಕೈಬಿಡುವಂತೆ ಆಗ್ರಹ
ಜಮಖಂಡಿ: ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಬರ ಪರಿಸ್ಥಿತಿ ಉಂಟಾಗಿದ್ದು, ರೈತರ ಬೆಳೆಸಾಲ ಮನ್ನಾ ಮಾಡಬೇಕು ಹಾಗೂ ಮುಂಗಾರು ಬೆಳೆ ನಷ್ಟಕ್ಕೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳ ಮೂಲಕವೂ ನೀರಾವರಿ ಸಾಧ್ಯವಾಗುತ್ತಿಲ್ಲ. ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ತುರ್ತು ಪರಿಹಾರ ಕ್ರಮ ಕೈಗೊಂಡು ಬೆಳೆಸಾಲ ಮನ್ನಾ ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಇಬಿ ಖಾಸಗೀಕರಣದ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು. ವಿದ್ಯುತ್ ಸೇವೆ ಸರ್ಕಾರಿ ಸಂಸ್ಥೆಯಲ್ಲಿಯೇ ಮುಂದುವರಿಯಬೇಕು. ಖಾಸಗೀಕರಣದಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದರು.
ರೈತರಿಗೆ ಸಂಬಂಧಿಸಿದ ವಿವಿಧ ಸರ್ಕಾರಿ ಸೇವೆಗಳ ಶುಲ್ಕದ ವಿವರವನ್ನು ಕಚೇರಿಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಿ, ಅನಽಕೃತ ಹಣ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ್, ಹನಮಂತ ಮಗದುಮ, ಯಲ್ಲಪ್ಪ ಹೆಗಡೆ, ಬಾಹುಬಲಿ ನ್ಯಾಮಗೌಡ, ಕಲ್ಲಪ್ಪ ಬಿರಾದಾರ, ಗುಡುಸಾಬ ಹೊನವಾಡ, ಸಿದ್ದುಗೌಡ ಪಾಟೀಲ, ಡಾ. ಅಜಯ ಕುಲಕರ್ಣಿ, ಶ್ರೀಶೈಲ ಮೈಗೂರ, ಪ್ರಸನ್ನ ಜಮಖಂಡಿ, ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ ಸೇರಿ ಅಥಣಿ ಮತ್ತು ಬಬಲೇಶ್ವರ ತಾಲೂಕಿನ ರೈತರು ಭಾಗವಹಿಸಿದ್ದರು.