ಪೊಲೀಸ್ ಕಾವಲಿನಲ್ಲಿ ಘಟಪ್ರಭಾ ಎಡದಂಡೆ ಕಾಲುವೆಯಿಂದ ಚಿಮ್ಮಡ ಗ್ರಾಮದಲ್ಲಿರುವ ಜಮಖಂಡಿ ಕಾಲುವೆಗೆ ಗೇಟ್‌ಗಳನ್ನು ತೆರೆದು ನೀರು ಹರಿಸಲಾಯಿತು. 
ಬಾಗಲಕೋಟೆ

ಎಂಟು ದಿನಗಳವರೆಗೆ ನೀರು ಹರಿಸಲು ರೈತರ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಕಾವಲಿನಲ್ಲಿ ಜಮಖಂಡಿ ಭಾಗಕ್ಕೆ ನೀರು ಬಿಡುಗಡೆ
  • ಘಟಪ್ರಭಾ ಎಡದಂಡೆ ಕಾಲುವೆಗೆ ಕಳೆದ ಎರಡು ದಿನಗಳಿಂದ ನೀರು ಹರಿಸಲಾಗುತ್ತಿದೆ.
  • ಬೇಸಿಗೆ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಜಿಎಲ್‌ಬಿಸಿ ಕಾಲುವೆ ಮೂಲಕ ಪ್ರತಿದಿನ 24 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು,
ಚಿಮ್ಮಡ: ಗ್ರಾಮದ ಮಾರ್ಗವಾಗಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆಗೆ ಕಳೆದ ಎರಡು ದಿನಗಳಿಂದ ನೀರು ಹರಿಸಲಾಗುತ್ತಿದೆ. ಆದರೆ ಜಮಖಂಡಿ ಭಾಗದ ಗೇಟ್‌ಗಳನ್ನು ಬಂದ್ ಮಾಡಿದ ಕಾರಣ ಆ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಮ್ಮಡ ಗ್ರಾಮದಲ್ಲಿ ಶನಿವಾರ ನಡೆದಿದೆ.
ಬೇಸಿಗೆ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಜಿಎಲ್‌ಬಿಸಿ ಕಾಲುವೆ ಮೂಲಕ ಪ್ರತಿದಿನ 24 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು, ನೀರು ಗ್ರಾಮದ ಕಾಲುವೆ ತಲುಪುತ್ತಿದ್ದಂತೆ ಕುಡಚಿ, ಹಾರೂಗೇರಿ ಭಾಗದ ರೈತರು ಇಲ್ಲಿನ ಜಮಖಂಡಿ ಕಾಲುವೆಯ ನಾಲ್ಕೂ ಗೇಟ್‌ಗಳನ್ನು ಬಂದ್ ಮಾಡಿ, ತಮ್ಮ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವಂತೆ ನೋಡಿಕೊಂಡಿದ್ದರು.
ನಂತರ ಜಮಖಂಡಿ ಭಾಗದ ರೈತರು ಸ್ಥಳಕ್ಕೆ ಆಗಮಿಸಿ, ಗೆಟ್‌ಗಳನ್ನು ತೆರೆದು ಜಮಖಂಡಿ ಭಾಗಕ್ಕೆ ನೀರು ಹರಿಸಲು ಪ್ರಯತ್ನಿಸಿದರೂ ಕುಡಚಿ, ಹಾರೂಗೇರಿ ಭಾಗದ ರೈತರು ಅವಕಾಶ ನೀಡಲಿಲ್ಲ. ನಂತರ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರನ್ನು ಸಂಪರ್ಕಿಸಿ, ತಮ್ಮ ಭಾಗಕ್ಕೆ ನೀರು ಹರಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಿದ್ದು ಕೊಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಜಮಖಂಡಿ ಕಾಲುವೆಯ ಗೆಟ್‌ಗಳನ್ನು ತೆರೆದು ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಭಾಗದ ರೈತರನ್ನು ಸೇರಿಸಿ ನಾವೇ ಗೇಟ್‌ಗಳನ್ನು ತೆರೆಯಬೇಕಾಗುತ್ತದೆ ಎಂದರು.
ಸಮಸ್ಯೆಯ ತೀವ್ರತೆಯನ್ನು ಅರಿತ ಡಿವೈಎಸ್ಪಿ ತಕ್ಷಣ ಪೊಲೀಸ್ ಕಾವಲಿನಲ್ಲಿಯೇ ಜಮಖಂಡಿ ಕಾಲುವೆಯ ಗೇಟ್‌ಗಳನ್ನು ತೆರೆದು, ಆ ಭಾಗಕ್ಕೆ ನೀರು ಹರಿಸಲಾಯಿತು. ಇನ್ನೂ ಎಂಟು ದಿನಗಳ ಕಾಲ ಈ ಭಾಗಕ್ಕೆ ಹರಿಯಲಿರುವ ನೀರು ಎಲ್ಲ ಭಾಗಕ್ಕೆ ಸಮರ್ಪಕವಾಗಿ ಹರಿಸುವಂತೆ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ರೈತರು, ನಾಗರಿಕರು ಆಗ್ರಹಿಸಿದ್ದಾರೆ.