ಬೀಳಗಿ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಹಸೀಲ್ದಾರ ವಿನೋಹ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ ಸೇರಿ ಇತರರಿದ್ದರು. 
ಬಾಗಲಕೋಟೆ

ಆಡಳಿತ ವ್ಯವಸ್ಥೆ ವಿರುದ್ಧ ರೈತರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ ವಿನೋದ ಹತ್ತಳ್ಳಿಗೆ ಮನವಿ ಸಲ್ಲಿಕೆ
  • ಕೃಷಿಕರಿಗೆ ತೊಂದರೆ ನೀಡುವುದು ಸರಿಯಲ್ಲ
  • ಬೀಳಗಿ ತಹಸೀಲ್ದಾರ ಕಚೇರಿ, ಸರ್ವೇ ಇಲಾಖೆ, ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ರೈತರ ಜಮೀನುಗಳ ಕೆಲಸಗಳು ಆಗುತ್ತಿಲ್ಲ
ಬೀಳಗಿ: ಬೀಳಗಿ ತಹಸೀಲ್ದಾರ ಕಚೇರಿ, ಸರ್ವೇ ಇಲಾಖೆ, ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ರೈತರ ಜಮೀನುಗಳ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ರೈತರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಜಮೀನು ಕೊಡುವುದು ಮತ್ತು ಖರೀದಿ ತಗೆದುಕೊಳ್ಳುವುದು ವಾಟ್ನಿ, ದುರಸ್ತಿ, ಹದ್ದಬಸ್ತು ಹಾಗೂ ಇನ್ನಿತರ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಸರ್ವೇ ಇಲಾಖೆಯಲ್ಲಿ ರೈತರಿಗೆ ತೊಂದರೆ ನೀಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಬಳಗಾನೂರ ಮಾತನಾಡಿ, ಕಳೆದ 4 ತಿಂಗಳಿಂದ ಸರ್ವೆ ಇಲಾಖೆಯಲ್ಲಿ ಪೋಡಿ, ಆಕಾರ ಬಂದ್, ಚಕ್ಕಬಂದಿ, ದುರಸ್ತಿ, ಖರೀದಿಗೆ ಬೇಕಾಗುವ ನಕ್ಷೆ ತಯಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಸರ್ಕಾರದಿಂದ ವೇತನ ಪಡೆದು ಕೆಲಸ ಮಾಡುವುದಿಲ್ಲ ಅಂತ ಹೇಳಿದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದರು.
ವೇತನವು ಬೇಕು ಆದರೆ ರೈತರ ಸಮಸ್ಯೆಗಳಿಗೆ ಸರಿಯಾದ ಸಮಯಕ್ಕೆ ಪರಿಹಾರ ದೊರಕಿಸುವುದು ಬೇಡ ಎಂದರೆ ಇದು ಯಾವ ನ್ಯಾಯ. ಇಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಇಲ್ಲದಂತಾಗಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಸಮಸ್ಯೆ, ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಬೀಟ್ ಇಲ್ಲ. ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಸಿಗುತ್ತಿಲ್ಲ. ಅರಣ್ಯ ಇಲಾಖೆಯವರು ಕುರಿಗಾಯಿ ಹಾಗೂ ದನಕರುಗಳ ಮಾಲೀಕರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಶಾಸಕರು ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತ ಕಿಡಿಕಾರಿದರು.
ಬಿಸನಾಳ ಶಂಕರ ತಳವಾರ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಉತ್ತರ ಕರ್ನಾಟಕ ಉಪಾಧ್ಯಕ್ಷ ಪರಶುರಾಮ ಮಂಟೂರ, ಯಮನಪ್ಪ ಯಳ್ಳಿಗುತ್ತಿ, ಶಿವಪ್ಪ ಯಳ್ಳಿಗುತ್ತಿ ಇದ್ದರು.