ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ರಬಕವಿ ಮಹಿಷವಾಡಗಿ ಸೇತುವೆ ವೀಕ್ಷಿಸಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿದರು. ಸಂಜಯ ತೋತಾವರ, ಸಂಗಮೇಶ ಮಡಿವಾಡಳರ, ರಾಮಣ್ಣ ಹುಲಕುಂದ, ಸಂಜು ಜೋತಾವರ ಇತರರಿದ್ದರು.
- ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವಾಗ್ದಾಳಿ
- ಮಹಿಷವಾಡಗಿ ಸೇತುವೆ ವಿಳಂಬಕ್ಕೆ ಸವದಿಯೇ ಕಾರಣ
ರಬಕವಿ/ಬನಹಟ್ಟಿ : ಮಹಿಷವಾಡಗಿ ಸೇತುವೆ ಕಾಮಗಾರಿಯು ರಾಜಕೀಯ ತಿರುವು ಪಡೆದಷ್ಟು ಕಾಮಗಾರಿ ವೇಗ ಹೆಚ್ಚುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ರಬಕವಿಯಲ್ಲಿ ಸೇತುವೆ ಕಾರ್ಯ ವಿಳಂಬಕ್ಕೆ ಸತ್ಯಾಗ್ರಹ ನಡೆದಿತ್ತು. ಅದಕ್ಕೂ ಪರಿಣಾಮಕಾರಿಯಾಗಿ ಕಾಂಗ್ರೆಸ್-ಬಿಜೆಪಿ ಬಹಿರಂಗ ವಾಗ್ದಾಳಿ ನಂತರ ಕಾಮಗಾರಿ ವೇಗ ದ್ವಿಗುಣಗೊಳ್ಳುತ್ತಿರುವುದೇ ವಿಶೇಷ.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಶುಕ್ರವಾರ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ರಬಕವಿ ಮಹೀಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೆಟಿ ನೀಡಿ ಮಾತನಾಡಿದ ಅವರು, 8 ವರ್ಷಗಳಿಂದ ತೇರದಾಳದಲ್ಲಿ ಸಿದ್ದು ಸವದಿಯವರೇ ಶಾಸಕರಾಗಿದ್ದಾರೆ. 2017ರಿಂದ ಕಾಮಗಾರಿಗೆ ವೇಗ ಪಡೆಯದೇ ಇರುವುದಕ್ಕೆ ಸವದಿಯವರ ನಿರ್ಲಕ್ಷ್ಯವೇ ಕಾರಣ. ಕ್ಷೇತ್ರದ ಜನತೆ ಹಾಗೂ ರಾಮಣ್ಣ ಹುಲಕುಂದ ನೇತೃತ್ವದಲ್ಲಿ ನಾಗರಿಕರು ಕಾಮಗಾರಿ ತ್ವರಿತಕ್ಕೆ ನನಗೆ ಒತ್ತಡ ಹೇರಿದ ನಂತರ ಸಚಿವ ಸತೀಶ ಜಾರಕಿಹೊಳಿ ಹಾಗೂ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ 10 ಕೋಟಿ ರೂ. ಗಳ ಹೆಚ್ಚುವರಿ ಹಣದಿಂದ ಒಟ್ಟು 55 ಕೋಟಿ ರೂ. ಗಳ ಕಾಮಗಾರಿ ವೇಗಕ್ಕೆ ಕಾರಣವಾಗಿದೆ. ಇದು ಕೂಡಾ ನನ್ನಿಂದನೇ ಆಗಿದ್ದು ಎಂದರು.
ಕಾರ್ಯವೂ ಇಲ್ಲ, ಹೋರಾಟವೂ ಇಲ್ಲ
ಮಹಿಷವಾಡಗಿ ಸೇತುವೆ ತ್ವರಿತಕ್ಕೆ ಶಾಸಕ ಸಿದ್ದು ಸವದಿಯವರ ಕೊಡುಗೆ ಶೂನ್ಯ. ಯಾವುದೇ ಹೋರಾಟವೂ ಇಲ್ಲ. ಕಾರ್ಯವೂ ಇಲ್ಲವೆಂದು ಕೊಣ್ಣೂರ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸೇತುವೆ ನಿರ್ಮಾಣದಲ್ಲಿ ರಾಜಕಾರಣ ನಡೆಸುತ್ತಿರುವುದು ನಾನಲ್ಲ ಬದಲಾಗಿ ಶಾಸಕರೆಂದು ತಿರುಗೇಟು ನೀಡಿದರು. 4 ಬಾರಿ ಶಾಸಕರಾಗಿರುವ ಹಿರಿಯ ರಾಜಕಾರಣಿ ಈ ರೀತಿ ಅಸಭ್ಯ ಮಾತುಗಳು ಸರಿಯಲ್ಲ. ಯಾವುದೇ ಕಾರ್ಯವಾಗಲಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಕೆಲಸ ಮಾಡುವ ಹಕ್ಕಿದೆ. ವಿನಾಕಾರಣ ಅವರದೇಕೆ ಪ್ರವೇಶವೆಂದು ಬಾಲಿಶತನದ ಮಾತುಗಳನ್ನು ಕೈಬಿಡಬೇಕೆಂದರು.
ಕಾಂಗ್ರೆಸ್ ಅವಧಿಯಲ್ಲಿ 10 ರೂ. ಕೆಲಸವಾಗಿಲ್ಲವೆಂದು ಹೇಳಿರುವ ಶಾಸಕ ಸವದಿ ಇತಿಹಾಸ ನೋಡಲಿ. ರಾಮಪೂರ ರಸ್ತೆ ದಿಬ್ಬು ಕಡಿದು ಸರಳೀಕರಣ, ವೆಂಕಟೇಶ್ವರ, ಸಸಾಲಟ್ಟಿ ಹಾಗೂ ಢವಳೇಶ್ವರ ಏತ ನೀರಾವರಿ ಹಾಗೂ ಮಹಿಷವಾಡಗಿ ಸೇತುವೆಗಳಂತಹ ಮಹತ್ತರ ಯೋಜನೆಗಳು ನಡೆದಿರುವುದೇ ಕಾಂಗ್ರೆಸ್ ಅವಧಿಯಲ್ಲಿ ಎಂದು ಕೊಣ್ಣೂರ ತಿಳಿಸಿದರು.
ಕ್ಷೇತ್ರದ ಜನ ಸೋಲಿಸಿದ್ದಾರೆಂದು ಹೇಳುತ್ತಿರುವ ಬಿಜೆಪಿ ಶಾಸಕ ಸವದಿಗೆ ಸ್ಪಷ್ಟೀಕರಿಸಿ, ಕಳೆದ ಚುನಾವಣೆಯಲ್ಲಿ 67 ಸಾವಿರ ಮತಗಳನ್ನು ಪಡೆದಿದ್ದೇನೆ. ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಯಿಂದ ಸೋತಿದ್ದೇನೆ ಹೊರತು ಬಿಜೆಪಿಯಿಂದಲ್ಲವೆಂದರು.
ರಾಮಣ್ಣ ಹುಲಕುಂದ, ಸಂಜು ಜೋತಾವರ, ಸಂಗಮೇಶ ಮಡಿವಾಳ, ಹೊನ್ನಪ್ಪ ಬಿರಡಿ, ಬುದ್ದಪ್ಪ ಕುಂದಗೋಳ, ಭೀಮಶಿ ಪಾಟೀಲ, ಮಹ್ಮದ್ ಮಕಾನದಾರ, ಮಹ್ಮದ್ ಝಾರೆ, ಸುನೀಲ ಹರಿಜನ ಇತರರಿದ್ದರು