ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಅಜಯಕುಮಾರ ಸರನಾಯಕ ಇದ್ದರು. 
ಬಾಗಲಕೋಟೆ

ನಡುಗಡ್ಡೆ ಪ್ರದೇಶ ಭೂ ಸ್ವಾಧೀನ ತ್ವರಿತಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ
  • ವಾಣಿಜ್ಯ ಕೇಂದ್ರ ನಿರ್ಮಾಣಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ
ಬಾಗಲಕೋಟೆ:

ಆಲಮಟ್ಟಿ ಹಿನ್ನೀರಿನಿಂದ ನಡುಗಡ್ಡೆ ಯಾಗುವ ಪ್ರದೇಶಗಳ ಭೂ ಸ್ವಾಧೀನ

ತುರ್ತಾಗಿ ಮಾಡಬೇಕು, ಬೃಹತ್ ವಾಣಿಜ್ಯ ಸಂಕೀರ್ಣಕ್ಕೆ 200 ಎಕರೆ ಪ್ರದೇಶ ಮೀಸಲಿಡಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಜಲ ಸಂಪನ್ಮೂಲ ಸಚಿವ ರಾಮ ಲಿಂಗಾರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಬಹುದಿನದಿಂದ ನನೆಗುದಿಗೆ ಬಿದ್ದಂತಹ ಹಳೆ ನಗರದ ವಾರ್ಡ್ ನಂ. 1, 2 ಮತ್ತು 3 ವ್ಯಾಪ್ತಿಯ ಪ್ರದೇಶಗಳಲ್ಲಿ 1200ಕ್ಕೂ ಹೆಚ್ಚು ಆಸ್ತಿಗಳು ಹಿನ್ನೀರು ಆವರಿಸಿ ನಡುಗಡೆಯಾಗಲಿವೆ. 524 ಮೀಟರ್ ವರೆಗೆ ನೀರು ನಿಲ್ಲಿಸಿದಾಗ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ಹಿನ್ನಲೆಯಲ್ಲಿ ಅವುಗಳಿಗೆ ಈಗಾಗಲೇ ಭೂ ಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ. ಆದರೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ವಿಳಂಬವಾಗುತ್ತಿದೆ. ಶೀಘ್ರದಲ್ಲಿ ಭೂ ಸ್ವಾಧೀನಗೊಳಿಸಬೇಕು ಎಂದು ಮನವಿ ಮಾಡಿದರು.
ಇನ್ನು ಪ್ರಾಧಿಕಾರದಿಂದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಕೆಲವು ಕಾನೂನು ಹಾಗೂ ನಿಯಮಗಳು ತೊಡಕುಗಳು ಇದ್ದು, ಅವುಗಳ ತಿದ್ದುಪಡಿ ಮಾಡಲು ಹೊಸ ಕಾಯ್ದೆಯಲ್ಲಿ ಮಾರ್ಪಾಡು ಮಾಡಲು ಬೈಲಾ ತಿದ್ದುಪಡಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಮಂಜೂರು ಮಾಡಬೇಕು. ಬಾಗಲಕೋಟೆ ನಗರದ ಸಮಸ್ತ ವ್ಯಾಪಾರಿಗಳ ಬೇಡಿಕೆಯಾದ ಯುನಿಟ್-3ರಲ್ಲಿ 200 ಎಕರೆ ವಾಣಿಜ್ಯ ಕೇಂದ್ರವಾಗಿ ಮಾರ್ಪಡಿಸಲು ಮಂಜೂರಾತಿ ಕೊಡಲು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ನಡುಗಡ್ಡೆ ಪ್ರದೇಶದ ಭೂ ಸ್ವಾಧೀನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗುಪ್ತಾ ಅವರಿಗೆ ಕೂಡಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು. ಅಲ್ಲದೆ ಬೈಲಾ ತಿದ್ದುಪಡಿ, ವಾಣಿಜ್ಯ ಕೇಂದ್ರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ಇದ್ದರು.