ಬಾಗಲಕೋಟೆ ಉಪ ಚುನಾವಣೆಯಲ್ಲಿ ದಿಗ್ವಿಜಯ ಸಾಽಸಿದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಚುನಾವಣಾ ಉಸ್ತುವಾರಿ ವಹಿಸಿದ್ದ ಸಚಿವ ಆರ್.ಬಿ. ತಿಮ್ಮಾಪೂರ ಸಿಹಿ ತಿನ್ನಿಸಿ, ಅಭಿನಂದಿಸಿದರು.
- ಕಾಂಗ್ರೆಸ್ ಗೆಲುವಿಗೆ ಸಚಿವ ತಿಮ್ಮಾಪೂರ ಹೇಳಿಕೆ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲುವಿಗೆ ಪಕ್ಷದಲ್ಲಿ ಎಲ್ಲರೂ ಸೇರಿಕೊಂಡು ಹಾಕಿದ ಒಗ್ಗಟ್ಟಿನ ಪರಿಶ್ರಮವೇ ಕಾರಣ ಎಂದು ಚುನಾವಣೆ ಉಸ್ತುವಾರಿಯನ್ನು ಹೊತ್ತಿದ್ದ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಬಾಗಲಕೋಟೆ ಉಪ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಅವರು, ನಮ್ಮ ಸರ್ಕಾರದ ಸಾಧನೆ, ಪಂಚ ಗ್ಯಾರಂಟಿ ಯೋಜನೆಗಳು, ರೈತ ಪರ ಅಭಿವೃದ್ಧಿ ಕಾರ್ಯಗಳು, ನಮ್ಮ ಕಾರ್ಯಕರ್ತರ ಒಗ್ಗಟ್ಟು ಎಲ್ಲವೂ ಗೆಲುವಿಗೆ ಸಹಕಾರಿ ಆಗಿವೆ ಎಂದರು.
ಬಾಗಲಕೋಟೆ ಕ್ಷೇತ್ರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಆರಂಭಿಸಿರುವುದು, ಮುಳುಗಡೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಬೆಲೆ ಘೋಷಣೆ ಮಾಡಿದ್ದಲ್ಲದೇ ಪರಿಹಾರದ ಚೆಕ್ ಸಹ ನೀಡುತ್ತಿದ್ದೇವೆ. ಇದರ ಜೊತೆಗೆ ಎಲ್ಲ ಜನರನ್ನು ಪ್ರೀತಿಯಿಂದ ಕಾಣುತ್ತಿದ್ದ ದಿ. ಎಚ್.ವೈ. ಮೇಟಿ ಅವರ ಬಗ್ಗೆ ಜನರಿಗೆ ಇದ್ದ ಅನುಕಂಪ ಮತ್ತು ಗೌರವ ಮತದಾರರು ಕಾಂಗ್ರೆಸ್ ಬೆಂಬಲಿಸುವಂತೆ ಮಾಡಿದೆ. ನಮ್ಮ ಮುಖ್ಯಮಂತ್ರಿಗಳು ಹಾಗೂ ಎಲ್ಲ ಸಚಿವರು, ಶಾಸಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪರಿಶ್ರಮ ಪಟ್ಟಿದ್ದು, ಇವತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಂತರದಲ್ಲಿ ಗೆಲುವು ಸಾಽಸಲು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸೇನೆಯನ್ನು ಬಳಕೆ ಮಾಡಿಕೊಂಡರು. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣೆ ಸಿದ್ಧಾಂತ ಪಾಲನೆ ಮಾಡಿಲ್ಲ. ಗಲ್ಲಿ ಗಲ್ಲಿಗಳಲ್ಲಿ ಸೇನಾ ಪಡೆ ನಿಲ್ಲಿಸಿದರು ಎಂದು ಸಚಿವ ತಿಮ್ಮಾಪೂರ ಆರೋಪಿಸಿದರು.
ತಮಿಳುನಾಡಿನಲ್ಲಿ ಚಿತ್ರನಟ ದಳಪತಿ ವಿಜಯ್ ಅವರ ಟಿವಿಕೆ ಗೆಲುವಿನ ಬಗ್ಗೆ, ಅಲ್ಲಿ ಚಿತ್ರ ನಟರ ಬಗ್ಗೆ ಮತದಾರರ ಒಲುವು ಇರುತ್ತದೆ. ಹೀಗಾಗಿ ವಿಜಯ್ ಪರವಾಗಿ ಮತದಾರರು ಮತ ಚಲಾಯಿಸಿದ್ದಾರೆ ಎಂದರು.