ಹುನಗುಂದದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹುನಗುಂದ ನಾಗರಿಕ ಸೇವಾ ಸುಧಾರಣೆ ಸಮಿತಿಯ ಜಿ.ಬಿ. ಕಂಬಾಳಿಮಠ ಮಾತನಾಡಿದರು. ಮಹಾಂತಯ್ಯ ಗಚ್ಚಿನಮಠ, ಎಸ್.ಜಿ.ಎಮ್ಮಿ ಇತರರಿದ್ದರು.
- ಪ್ರಗತಿಗೆ ನಾಗರಿಕ ಸೇವಾ ಸಮಿತಿಯ ಮುಂದಾಳತ್ವ
- ಪೂರ್ವಭಾವಿ ಸಭೆ
- ಸಮಿತಿಯ ಪ್ರಯತ್ನದಿಂದ ಹುನಗುಂದ ಬಸ್ ಘಟಕ, ಒಳಚರಂಡಿ ವ್ಯವಸ್ಥೆ
ಹುನಗುಂದ: ಪಟ್ಟಣದ ಅಭಿವೃದ್ಧಿಗೆ ಕಳೆದ 42 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ನಾಗರಿಕ ಸೇವಾ ಸುಧಾರಣೆ ಸಮಿತಿಯು ಹಲವಾರು ಸೌಕರ್ಯ ಯೋಜನೆಗಳನ್ನು ಸಾಕಾರಗೊಳಿಸಿದೆ ಎಂದು ಸಮಿತಿ ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಹೇಳಿದರು.
ನಗರದ ಬಸವ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಿತಿ ಪುನರ್ ರಚನೆ ಹಾಗೂ ಸದಸ್ಯತ್ವ ವಿಸ್ತರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಿತಿಯ ಪ್ರಯತ್ನದಿಂದ ಹುನಗುಂದ ಬಸ್ ಘಟಕ, ಒಳಚರಂಡಿ ವ್ಯವಸ್ಥೆ, 110 ಕೆ.ವಿ ಹಾಗೂ 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣ ಸಾಧ್ಯವಾಗಿದೆ ಎಂದು ತಿಳಿಸಿದರು. ಹುನಗುಂದ ಹಳ್ಳದ ಅಭಿವೃದ್ಧಿಗೆ ನಿರಂತರ ಮನವಿ ಸಲ್ಲಿಸಲಾಗುತ್ತಿದ್ದು, ಆಡಳಿತ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ತಿಳಿಸಿದರು.
ಶಿಕ್ಷಕ ಎಸ್.ಜಿ. ಎಮ್ಮಿ ಮಾತನಾಡಿ, ಇತರ ತಾಲೂಕಿನ ನಗರಗಳಂತೆ ಹುನಗುಂದವೂ ಸೌಂದರ್ಯೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಿವೃತ್ತ ಶಿಕ್ಷಕ ಎಸ್.ಕೆ. ಕೊನೆಸಾಗರ ಮಾತನಾಡಿ, ಸಮಿತಿ ಪುನರ್ ರಚನೆ ಸಕಾರಾತ್ಮಕ ಹೆಜ್ಜೆಯಾಗಿದ್ದು, ಸದಸ್ಯರು ಪಕ್ಷಾತೀತ ಹಾಗೂ ಜಾತ್ಯತೀತ ಮನೋಭಾವ ಹೊಂದಿರಬೇಕು ಎಂದು ಸಲಹೆ ನೀಡಿದರು.
ಸಮಿತಿ ಅಧ್ಯಕ್ಷ ವಿ.ಆರ್. ಜನಾದ್ರಿ, ಮಲ್ಲಿಕಾರ್ಜುನ ದರಗಾದ ಮಾತನಾಡಿದರು.
ಮಹಾಂತಯ್ಯ ಗಚ್ಚಿನಮಠ, ಎಸ್.ಎಸ್. ಬಳೂಟಗಿ, ಬಿ.ಎಂ. ಲೈನದ, ಬಿ.ಎಂ. ಯಡಹಳ್ಳಿ, ಮುನ್ನಾ ಭಾಗವಾನ, ಬಸವರಾಜ ಕಮ್ಮಾರ ಸೇರಿ ಇತರರು ಉಪಸ್ಥಿತರಿದ್ದರು.