ಇಳಕಲ್ಲ ತಾಲೂಕಿನ ಹಿರೇಶಿವನಗುತ್ತಿ ಗ್ರಾಮದ ಕಾಲುವೆಯಲ್ಲಿ ರೈತರು ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ರೈತ ಪರತಗೌಡ ಪಾಟೀಲ, ಅಮರೇಗೌಡ ಪಾಟೀಲ, ಮಹಾಂತಗೌಡ ಹಿರೇಗೌಡರ, ಸಂಗಪ್ಪ ಮೇರಾಕೋರ, ಮುತ್ತಪ್ಪ ಭಜಂತ್ರಿ, ಶರಣಪ್ಪಗೌಡ ಹಿರೇಗೌಡರ, ಕಾಂತಯ್ಯ ಪತ್ರಿ, ಶರಣಪ್ಪ ತೊಂಡಿಹಾಳ, ಯಂಕನಗೌಡ ಆದಾಪೂರ ಇತರರಿದ್ದರು. 
ಬಾಗಲಕೋಟೆ

ಕೆರೆ ತುಂಬಿದರೂ ಹೊಲಗಳಿಗೆ ಬಾರದ ನೀರು

ಪ್ರಮುಖ ಮುಖ್ಯಾಂಶಗಳು

  • ಬೆಳೆ ಉಳಿಸಿಕೊಳ್ಳಲು ರೈತರಿಂದಲೇ ಕಾಲುವೆ ಹೂಳೆತ್ತುವ ಕಾರ್ಯ
  • 1 ಲಕ್ಷ ರೂ. ಹಣ ಸಂಗ್ರಹ
ಇಳಕಲ್ಲ : ಕೆರೆಯಲ್ಲಿ ಸಮೃದ್ಧ ನೀರಿನ ಸಂಗ್ರಹವಿದ್ದರೂ ಕಾಲುವೆಗಳ ದುಸ್ಥಿತಿಯಿಂದ ಹೊಲಗಳಿಗೆ ನೀರು ತಲುಪದ ಕಾರಣ ತಾಲೂಕಿನ ಹಿರೇಶಿವನಗುತ್ತಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ರೈತರು ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ.
ಗ್ರಾಮದ ಕೆರೆಯು ಸುಮಾರು 2,200 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಆದರೆ ಕಾಲುವೆಗಳಲ್ಲಿ ಹೂಳು, ಕಸ ಹಾಗೂ ಗಿಡಗಂಟಿಗಳು ತುಂಬಿಕೊAಡಿರುವುದರಿAದ ನೀರಿನ ಹರಿವು ಸ್ಥಗಿತಗೊಂಡಿದೆ. ಪರಿಣಾಮವಾಗಿ ಸುಮಾರು 1,500 ಎಕರೆ ಪ್ರದೇಶದ ರೈತರು ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ.
ಕಾಲುವೆ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಹಾಗೂ ನೀರಾವರಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಸುಮಾರು 1 ಲಕ್ಷ ರೂ. ಹಣ ಸಂಗ್ರಹಿಸಿ ಜೆಸಿಬಿ ಮೂಲಕ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ.
ರೈತ ಪರತಗೌಡ ಪಾಟೀಲ ಮಾತನಾಡಿ, 1972ರಲ್ಲಿ ನಿರ್ಮಾಣಗೊಂಡ ಈ ಕೆರೆಯಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಉದ್ದೇಶ ಇತ್ತು. ಆದರೆ ಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದರಿಂದ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಪ್ರತಿವರ್ಷ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಕಾಲುವೆ ಹೂಳೆತ್ತುವ ಕಾರ್ಯ ಕೈಗೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅಽಕಾರಿಗಳು ಟೆಂಡರ್ ಪ್ರಕ್ರಿಯೆಯ ನೆಪ ಹೇಳುತ್ತಾ ಕಾಲುವೆ ನಿರ್ವಹಣೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ರೈತರೇ ಮುಂದೆ ಬಂದು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಮರೇಗೌಡ ಪಾಟೀಲ, ಮಹಾಂತಗೌಡ ಹಿರೇಗೌಡರ, ಸಂಗಪ್ಪ ಮೇರಾಕೋರ, ಮುತ್ತಪ್ಪ ಭಜಂತ್ರಿ, ಶರಣಪ್ಪಗೌಡ ಹಿರೇಗೌಡರ, ಕಾಂತಯ್ಯ ಪತ್ರಿ, ಶರಣಪ್ಪ ತೊಂಡಿಹಾಳ, ಯಂಕನಗೌಡ ಆದಾಪೂರ, ಬಸಪ್ಪ ತೊಂಡಿಹಾಳ, ಮುದಿಯಪ್ಪ ಬಂಗಿ, ವಿರೂಪಾಕ್ಷಗೌಡ ಅಗಸಿಮುಂದಿನ ಹಾಗೂ ವೆಂಕಣ್ಣ ಬಾರಡ್ಡಿ ಸೇರಿ ಹಲವರು ಕಾಲುವೆ ನಿರ್ವಹಣೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.