ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಬಳಿ ಸಂಪೂರ್ಣ ಬರಿದಾಗಿರುವ ಕೃಷ್ಣಾ ನದಿಯ ಒಡಲು.
- ನಲ್ವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪರಿಸ್ಥಿತಿ ಉಲ್ಬಣ
- ಬಸಿ ನೀರಿಗಾಗಿ ಹುಡುಕಾಟ
- ಬೆಳೆಗಳ ಸ್ಥಿತಿ ದೇವರಿಗೇ ಪ್ರೀತಿ
ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿಯ ಒಡಲು ಸಂಪೂರ್ಣ ಖಾಲಿಯಾಗಿದ್ದರಿಂದ ನದಿ ತೀರದ ಗ್ರಾಮಗಳು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿವೆ. 40ಕ್ಕೂ ಅಧಿಕ ಗ್ರಾಮಗಳಿಗೆ ನದಿಯ ಒಡಲಿನ ಬಸಿ ನೀರೇ ಜೀವಾಳವಾಗಿದೆ.
ಪ್ರಸ್ತುತ ನದಿಯಲ್ಲಿ ನೀರಿಲ್ಲದ ಕಾರಣ, ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ನದಿ ಪಾತ್ರದಲ್ಲಿ ಸಣ್ಣ ಪುಟ್ಟ ಕಾಲುವೆ ಹಾಗೂ ಗುಂಡಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಜಿನುಗುವ ಬಸಿ ನೀರನ್ನು ಸಂಗ್ರಹಿಸಿ ತಮ್ಮ ಜಾನುವಾರುಗಳ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಜಮಖಂಡಿ ತಾಲೂಕಿನ ಮೈಗೂರ, ಮುತ್ತೂರ, ತುಬಚಿ, ಕಂಕನವಾಡಿ ಸೇರಿ ಅಥಣಿ ತಾಲೂಕಿನ ಝುಂಜರವಾಡ, ಶಿರಹಟ್ಟಿ ಹಾಗೂ ಸುತ್ತಮುತ್ತಲಿನ 40ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಅಭಾವ ತಲೆದೋರಿದೆ. ಮಳೆಗಾಲದಲ್ಲಿ ನೂರಾರು ಟಿಎಂಸಿ ನೀರಿನೊಂದಿಗೆ ರುದ್ರಾವತಾರ ತಳೆಯುವ ಕೃಷ್ಣೆ, ಬೇಸಿಗೆ ಸಮಯದಲ್ಲಿ ಸಂಪೂರ್ಣ ಖಾಲಿಯಾಗುವುದು ಇಲ್ಲಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ.
ಬೆಳೆಗಳು ಒಣಗುವ ಭೀತಿ
ಶಿರಗುಪ್ಪಿ, ಕಡಕೊಳ, ಹಿಪ್ಪರಗಿ, ಶೂರ್ಪಾಲಿ, ಜಂಬಗಿ ಕೆ.ಡಿ, ಹಿರೆಪಡಸಲಗಿ ಸೇರಿ ನದಿಯನ್ನೇ ನಂಬಿರುವ 40ಕ್ಕೂ ಅಧಿಕ ಗ್ರಾಮಗಳಲ್ಲಿ ಅಂದಾಜು 70 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿರುವ ಬೆಳೆಗಳು ಒಣಗುವ ಭೀತಿಯಲ್ಲಿವೆ. ಮಹಾರಾಷ್ಟçದಲ್ಲಿ ಅತಿಯಾದ ಮಳೆಯಾದರೆ ನೆರೆಯಿಂದ ಬೆಳೆ ಕಳೆದುಕೊಳ್ಳುವ ಇಲ್ಲಿನ ರೈತರು, ಬೇಸಿಗೆಯಲ್ಲಿ ನೀರಿಲ್ಲದೆ ಬೆಳೆ ಒಣಗುವುದನ್ನು ಕಂಡು ಕಣ್ಣೀರಿಡುತ್ತಿದ್ದಾರೆ.
ನೀರು ಕೊಡಲಾಗದಿದ್ದರೆ ವಿಷ ಕೊಡಿ
ಆಲಮಟ್ಟಿ ಅಣೆಕಟ್ಟು ನಿರ್ಮಾಣಕ್ಕಾಗಿ ತಮ್ಮ ಭೂಮಿ ಬಿಟ್ಟುಕೊಟ್ಟ ರೈತರ ಸ್ಥಿತಿ ಇಂದು ದೀಪದ ಕೆಳಗಿನ ಕತ್ತಲೆಯಂತಾಗಿದೆ. ನಮ್ಮ ಪೂರ್ವಜರ ಭೂಮಿಯನ್ನು ಆಣೆಕಟ್ಟಿನ ಹಿನ್ನೀರಿಗಾಗಿ ಕೊಟ್ಟೆವು. ಸರ್ಕಾರ ಕೊಟ್ಟ ಹಣವೂ ಖಾಲಿಯಾಯಿತು, ಈಗ ಕುಡಿಯಲು ನೀರೂ ಸಿಗುತ್ತಿಲ್ಲ. ನಮಗೆ ನೀರು ಕೊಡಲು ಸಾಧ್ಯವಾಗದಿದ್ದರೆ ವಿಷ ಕೊಟ್ಟು ಕೊಂದುಬಿಡಿ, ಅಷ್ಟಾದರೂ ನೆಮ್ಮದಿಯಾಗಿರುತ್ತೇವೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಾವೇರಿಗಿರುವ ಕಾಳಜಿ ಕೃಷ್ಣೆಗೆ ಏಕಿಲ್ಲ?
ಕಾವೇರಿ ನದಿ ತೀರದ ರೈತರಿಗೆ ನೀರಿನ ಕೊರತೆಯಾಗದಂತೆ ವಿಶೇಷ ಕಾಳಜಿ ವಹಿಸುವ ಸರ್ಕಾರ, ಕೃಷ್ಣಾ ನದಿ ಪಾತ್ರದ ಜನರ ಸಮಸ್ಯೆಗಳ ಬಗ್ಗೆ ಮೌನ ವಹಿಸಿರುವುದೇಕೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
ಮೇ 1ರಂದು ಹಿಪ್ಪರಗಿ ಜಲಾಶಯದಿಂದ ಬಿಟ್ಟ 0.10 ಟಿಎಂಸಿ ನೀರು ಮುತ್ತೂರ ಗ್ರಾಮವನ್ನೂ ತಲುಪಿಲ್ಲ. ಸರ್ಕಾರ ತಕ್ಷಣ ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗಿರಿಮಲ್ಲ ಪಾಟೀಲ, ಬಸು ಮಿರ್ಜಿ, ಮಲ್ಲು ಪಾಟೀಲ, ಸದಾಶಿವ ಪಾಟೀಲ, ಬಿ.ಟಿ. ಸವದಿ ಸೇರಿ ನೂರಾರು ರೈತರು ಒತ್ತಾಯಿಸಿದ್ದಾರೆ.
"
ಆಲಮಟ್ಟಿಗೆ ಜಮೀನು ಕೊಟ್ಟಿವಿ. ಅದರ ಜೊತೆ ನಮ್ಮ ಜೀವನಾನೂ ಬರ್ಬಾದ ಆಗೈತ್ರಿ. ನಮ್ಮ ಜೀವನ ಚಲೋ ಆಗತ್ ಅಂದ್ರು ಇವತ್ ನೋಡ್ರಿ, ಪರಿಸ್ಥಿತಿ ಬಹಳ ಕಷ್ಟದಾಗ ಉಳಿದೈತರೀ. ನಮ್ಮ ಹೊಳ್ಯಾಗ ನೀರು ಇಲ್ರೀ. ಸರ್ಕಾರ ಕೊಟ್ಟ ಪರಿಹಾರ ಧನವು ಮುಗಿದ ಹೋಗ್ಯಾವರೀ. ಊರ ಬೀಡಾಕನೂ ತಯಾರಿ ಆಗಿವ್ರೀ.
— | ಗಿರಿಮಲ್ಲ ಪಾಟೀಲ, ಗ್ರಾಮಸ್ಥರು