ಬಾಗಲಕೋಟೆ ನವನಗರದ ಅಂಬೇಡ್ಕರ ಭವನದಲ್ಲಿರುವ ಸಿಎಂಸಿ ಡಿಜಿಟಲ್ ಗ್ರಂಥಾಲಯ (ಮ.ಸಂ.196) ದಲ್ಲಿ ಯುವ ಮತಗಟ್ಟೆಗೆ ಜಿ.ಪಂ. ಸಿಇಒ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಸಿ. ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಡದಾನಿ, ನಗರಸಭೆ ಆಯುಕ್ತ ಆರ್. ವಾಸಣ್ಣ ಇದ್ದರು. 
ಬಾಗಲಕೋಟೆ

ಮತದಾನಕ್ಕೆ ವಿಶೇಷ ಮತಗಟ್ಟೆಗಳ ಸ್ಥಾಪನೆ

ಪ್ರಮುಖ ಮುಖ್ಯಾಂಶಗಳು

  • ಮತಗಟ್ಟೆ ಗೋಡೆಗಳ ಮೇಲೆ ರಂಗು ರಂಗಿನ ಬಣ್ಣದ ಚಿತ್ತಾರ
  • ಚುನಾವಣಾ ಆಯೋಗ ನಿರ್ದೇಶನ
ಬಾಗಲಕೋಟೆ: ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ವ್ಯಾಪ್ತಿಯಲ್ಲಿ ಸಖಿ, ಅಂಗವಿಕಲರ ಸ್ನೇಹಿ, ಯುವ ಹಾಗೂ ಥೀಮ್ ಆಧಾರಿತ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಮತದಾನ ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬುಧವಾರ ನವನಗರ ಅಂಬೇಡ್ಕರ ಭವನದಲ್ಲಿ ಸ್ಥಾಪಿಸಲಾದ ಸಖಿ ಮತ್ತು ಯುವ ಮತಗಟ್ಟೆ ಹಾಗೂ ಅಂಜುಮನ್ ಇಂಗ್ಲಿಷ್ ಮೀಡಿಯಂ ಪ್ರೀ ಪ್ರೈಮರಿ ಸ್ಕೂಲ್, ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಎರಡು ಪಿಂಕ್ (ಸಖಿ), ತಲಾ ಒಂದು ಯುವ, ಅಂಗವಿಕಲ ಹಾಗೂ ಥೀಮ್ ಆಧಾರಿತ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.
ವಿಶೇಷ ಮತಗಟ್ಟೆಗಳಿಗೆ ಭೇಟಿ ನೀಡಿ ಜಿ.ಪಂ ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಶಶಿಧರ ಕುರೇರ ಮಾತನಾಡಿ, ಮತದಾನದ ಪ್ರಮಾಣವನ್ನು ಹೆಚ್ಚು ಮಾಡುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗಿದೆ. ಇನ್ನು ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಒಟ್ಟು 5 ಬಗೆಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಗೋಡೆಗಳ ಮೇಲೆ ಬಗೆ ಬಗೆಯ ಚಿತ್ರಗಳ ಜೊತೆಗೆ ಮತದಾನದ ಜಾಗೃತಿ ಕುರಿತು ಘೋಷ ವಾಕ್ಯಗಳನ್ನು ಬರೆಯಲಾಗಿದೆ. ಅಂಗವಿಕಲ ಮತದಾರರನ್ನು ಆಕರ್ಷಿಸುವ ರಂಗು ರಂಗಿನ ಚಿತ್ತಾರದ ಚಿತ್ರಗಳು, ಪಿಂಕ್ ಬಣ್ಣದಿಂದ ಅಲಂಕೃತಗೊಂಡ ಸಖಿ ಮತಗಟ್ಟೆಗಳು ರೂಪಿಸಲಾಗಿದೆ. ಮತದಾರರು ಕೈ ಬೀಸಿ ಕರೆಯುವಂತಿವೆ ಎಂದು ತಿಳಿಸಿದರು.
ಭಾರತ ದೇಶದಂತಹ ಬೃಹತ್ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಅಚ್ಚುಕಟ್ಟಾಗಿ ಸಂಘಟಿಸುವುದು ಒಂದು ಸವಾಲಿನ ಕೆಲಸ. ಮತದಾರರಲ್ಲಿ ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಹಲವು ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತ ಬಂದಿದೆ. ಆ ಮಾರ್ಗದಲ್ಲಿಯೇ ಜಿಲ್ಲಾ ಸ್ವೀಪ್ ಸಮಿತಿಯ ಮತ್ತೊಂದು ಅದ್ಭುತ ಕಲ್ಪನೆ ಇದಾಗಿದೆ. ಎಲ್ಲರನ್ನು ಒಳಗೊಳ್ಳುವಿಕೆಯ ಮಂತ್ರ ಈ ವಿಶೇಷ ಮತಗಟ್ಟೆಗಳ ನಿರ್ಮಾಣದ ಹಿಂದೆ ಇದೆ. ಮತದಾರರನ್ನು ಮತಗಟ್ಟೆಯ ಕಡೆ ಸೆಳೆದು ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಸಿ. ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಡದಾನಿ, ಜಿ.ಪಂ. ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ನಗರಸಭೆ ಆಯುಕ್ತ ವಾಸಣ್ಣ ಆರ್ ಸೇರಿ ಇತರರಿದ್ದರು.

ವಿಶೇಷ ಮತಗಟ್ಟೆಗಳ ವಿವರ

ನವನಗರದ ಡಾ. ಬಿ.ಆರ್. ಅಂಬೇಡ್ಕರ ಭವನದ ಮತಗಟ್ಟೆ ನಂ. 195ರಲ್ಲಿ ಹಾಗೂ ಭಗವತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಮ.ಸಂ. 62) ಪಿಂಕ್ ಮತಗಟ್ಟೆ, ನವನಗರದ ಅಂಬೇಡ್ಕರ ಭವನದಲ್ಲಿರುವ ಸಿಎಂಸಿ ಡಿಜಿಟಲ್ ಗ್ರಂಥಾಲಯ (ಮ.ಸಂ.196) ದಲ್ಲಿ ಯುವ ಮತಗಟ್ಟೆ, ಬಾಗಲಕೋಟೆ ನಗರದ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಮ.ಸಂ. 212) ರಲ್ಲಿ ಅಂಗವಿಕಲರ ಸ್ನೇಹಿ ಹಾಗೂ ವಿದ್ಯಾಗಿರಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ (ಮ.ಸಂ. 89) ರಲ್ಲಿ ಥೀಮ್ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.