ಬೀಳಗಿಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಬೀಳಗಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ, ಯುವ ಮುಖಂಡ ಅಕ್ಷಯ ನಾಯಕರ, ಬಿಜೆಪಿ ತಾಲೂಕು ಅಧ್ಯಕ್ಷ ಹೊಳಬಸು ಬಾಳಶಟ್ಟೆ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ರಾಮಣ್ಣ ಕಾಳಪ್ಪಗೋಳ, ಬಸವಂತಪ್ಪ ಸಂಕನಟ್ಟಿ ಇತರರಿದ್ದರು.
- ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ ಒತ್ತಾಯ
- ಬರಪೀಡಿತ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರಕ್ಕೆ ಬಿಜೆಪಿ ಆಗ್ರಹ
- ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೀಳಗಿ : ಪಟ್ಟಣದಲ್ಲಿ ಬಿಜೆಪಿ ಬೀಳಗಿ ಮಂಡಲದ ವತಿಯಿಂದ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ತಕ್ಷಣ ಪರಿಹಾರ ನೀಡಿ ಹಾಗೂ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿ, ಬಿಜೆಪಿ ಮುಖಂಡರು, ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆ ಸಾಲ ಸೇರಿ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ ಮಾತನಾಡಿ, ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದ್ದರೂ ಸರ್ಕಾರ ರೈತರ ನೆರವಿಗೆ ಸಮರ್ಪಕವಾಗಿ ಧಾವಿಸಿಲ್ಲ ಎಂದು ಆರೋಪಿಸಿದರು. ಕಷಿಗೆ ಅಗತ್ಯವಿರುವ ತ್ರಿೇಸ್ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದಲೂ ರೈತರಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಪೂರೈಕೆ ಸಮರ್ಪಕಗೊಳಿಸಿ, ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಅವರು, ರಾಷ್ಟ್ರಭಕ್ತಿಯ ಸಂಕೇತವಾಗಿರುವ ಗೀತೆಯ ಪೂರ್ಣರೂಪ ಹಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಯುವ ಮುಖಂಡ ಅಕ್ಷಯ ನಾಯಕರ ಮಾತನಾಡಿ, ವಂದೇ ಮಾತರಂ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು. ಇದೇ ರೀತಿಯ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ನಾಡಗೀತೆ ಸೇರಿ ಇತರ ರಾಷ್ಟ್ರ ಭಾವನೆಗೆ ಸಂಬಂಧಿಸಿದ ಗೀತೆಗಳಿಗೂ ಅನ್ವಯಿಸುವುದೇ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಹೊಳಬಸು ಬಾಳಶಟ್ಟೆ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ರಾಮಣ್ಣ ಕಾಳಪ್ಪಗೋಳ, ಬಸವಂತಪ್ಪ ಸಂಕನಟ್ಟಿ, ಶಿವಪ್ಪ ಮಸೂತಿ, ಗಂಗಾಧರ ಬಿಂಗಿ, ಪಪಂ ಮಾಜಿ ಅಧ್ಯಕ್ಷ ಮುತ್ತು ಬೋರ್ಜಿ, ಮಾಜಿ ಸದಸ್ಯ ಸಿದ್ದು ಮಾದರ, ಬಸವರಾಜ ಉಚಮಗಿಮಠ, ಸಿದ್ದಪ್ಪ ಕಡಪಟ್ಟಿ, ಮಲ್ಲಪ್ಪ ತೋಳಮಟ್ಟಿ, ದ್ರಾಕ್ಷಾಯಣಿ ಬಜಂಗಿ ಸೇರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.