ಕಮತಗಿ ಸಮೀಪದ ಹಳ್ಳೂರ ಗ್ರಾಮದ ಮಾತೋಶ್ರೀ ನೀಲಮ್ಮ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಮಾತೋಶ್ರೀ ಈರಮ್ಮ ರುದ್ರಗೌಡ ಪಾಟೀಲ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಗ್ರಂಥಾಲಯ ಕೊಠಡಿ ಮಾಜಿ ಸಚಿವ ಎಸ್.ಆರ್.ಪಾಟೀಲ ಉದ್ಘಾಟಿಸಿದರು. ತೋವಿವಿ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಎಸ್.ಬಿ. ರಾಮರಥ, ಪಾಂಡುರಂಗ ಸಣ್ಣಪ್ಪನವರ, ವಿಜಯ ಮಹಾಂತೇಶ ಬಂಗಾರಗುಂಡ, ನಿವೃತ್ತ ಶಿಕ್ಷಕ ವೈ.ವೈ. ಚಲವಾದಿ, ಸುಜಾತಾ ಆರ್. ಪಾಟೀಲ ಇದ್ದರು. 
ಬಾಗಲಕೋಟೆ

ಗ್ರಂಥಾಲಯದಿಂದ ಜ್ಞಾನ ಭಂಡಾರ ವೃದ್ಧಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಸ್.ಆರ್. ಪಾಟೀಲ ಅಭಿಮತ
  • ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ
ಕಮತಗಿ : ವ್ಯಕ್ತಿಯ ವ್ಯಕ್ತಿತ್ವ ವಿಕಸನ ಹಾಗೂ ಜ್ಞಾನದ ವಿಸ್ತಾರಕ್ಕೆ ಗ್ರಂಥಾಲಯಗಳು ಸಹಕಾರಿಯಾಗುತ್ತವೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಸಮೀಪದ ಹಳ್ಳೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾತೋಶ್ರೀ ನೀಲಮ್ಮ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಮಾತೋಶ್ರೀ ಈರಮ್ಮ ರುದ್ರಗೌಡ ಪಾಟೀಲ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಅವರು ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಗ್ರಂಥಾಲಯಗಳ ಪಾತ್ರವೂ ಮಹತ್ತರವಾಗಿದ್ದು, ಉನ್ನತ ಹುದ್ದೆ ಪಡೆಯಲು ಜ್ಞಾನದ ಹರಿವು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿದೆ. ಆ ದಿಸೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕು. ಶಿಕ್ಷಕರು ಶ್ರದ್ಧೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಮಕ್ಕಳಿಗೆ ಸಂಸ್ಕಾರ ಹಾಗೂ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮಾತನಾಡಿ, ಶಾಲೆಗಳು ದೇವಾಲಯವಾಗಿದ್ದರೆ ಗ್ರಂಥಾಲಯಗಳು ದೇವಾಲಯದ ಗರ್ಭ ಗುಡಿಗಳು. ಹೀಗಾಗಿ ಗ್ರಂಥಾಲಯಗಳಿಂದ ಮಕ್ಕಳ ಜ್ಞಾನ ವೃದ್ಧಿಸುತ್ತದೆ. ಜೀವನದಲ್ಲಿ ಯಶಸ್ಸು ಪಡೆಯಲು ವಿದ್ಯಾರ್ಥಿಗಳು ಗ್ರಂಥಾಲಯ ಪ್ರಯೋಜನ ಪಡೆಯಬೇಕು ಎಂದರು.
ಗ್ಯಾನಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ತೋಟಗಾರಿಕಾ ವಿವಿ ಸಹಾಯಕ ಆಡಳಿತಾಧಿಕಾರಿ ಎಸ್.ಬಿ. ರಾಮರಥ, ನ್ಯಾಯವಾದಿ ಸುಜಾತಾ ಆರ್. ಪಾಟೀಲ, ಬಾಪೂಜಿ ಬ್ಯಾಂಕ್ ನಿರ್ದೇಶಕ ನಿಂಗರಾಜ ಕೊಟಗಿ, ಎನ್.ಸಿ. ದೊಡ್ಡನಗೌಡರ, ಸೋಮನಗೌಡ ಮೇಟಿ, ಆರ್.ಎಚ್. ಗದ್ದನಕೇರಿ, ಎಸ್.ಎಸ್. ಗದ್ದನಕೇರಿ, ಸಂಸ್ಥೆಯ ಕಾರ್ಯದರ್ಶಿ ಎಂ.ಎಂ. ಕಮತರ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ವಿಜಯಮಹಾಂತೇಶ ಬಂಗಾರಗುಂಡ, ವೈ.ವೈ. ಚಲವಾದಿ ಇದ್ದರು. ಸರೋಜಿನಿ ಸುನಗದ ಪ್ರಾರ್ಥಿಸಿದರು. ರೇಷ್ಮಾ ಸ್ವಾಗತಿಸಿದರು. ವಿಜಯಲಕ್ಷ್ಮೀ ಹೂಗಾರ ನಿರೂಪಿಸಿದರು.