ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ವಿಭಾಗದ ಮತ್ತು ವಿದ್ಯಾರ್ಥಿ ವೃಂದ ವತಿಯಿಂದ ಸಿರಿ ಸಾಂಸ್ಕೃತಿಕ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಎತ್ತಿನ ಬಂಡಿಯಲ್ಲಿ ಕರೆತರಲಾಯಿತು. 
ಬಾಗಲಕೋಟೆ

ಜನಪದ ಕಥೆಗಳಿಂದ ಸತ್ಯದ ಮೌಲ್ಯಗಳ ವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಟಿ.ಎಸ್.ಒಂಟಗೋಡಿ ಹೇಳಿಕೆ
  • ಕೆಎಲ್‌ಇ ಕಾಲೇಜಿನಲ್ಲಿ ಸಿರಿ ಸಾಂಸ್ಕೃತಿಕ ಹಬ್ಬ
ಮಹಾಲಿಂಗಪುರ: ಜನಪದ ಪುಸ್ತಕಗಳಲ್ಲಿ ಹುಟ್ಟಿದ ಸಾಹಿತ್ಯವಲ್ಲ. ಇದು ಜನರ ಹೃದಯದಿಂದ ಹುಟ್ಟಿದ ಸಾಹಿತ್ಯ. ಪೀಳಿಗೆಯಿಂದ ಪೀಳಿಗೆಗೆ ಮಾತಿನ ಮೂಲಕ ಸಾಗುತ್ತಾ ಬಂದಿರುವುದು ಇದರ ವಿಶೇಷತೆ ಎಂದು ಜನಪದ ಸಾಹಿತಿ ಹಾರೂಗೇರಿಯ ಸಿದ್ಧೇಶ್ವರ ಪಿ.ಯು ಕಾಲೇಜಿನ ಪ್ರಾಚಾರ್ಯ ಟಿ.ಎಸ್.ಒಂಟಗೋಡಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಚನ್ನಗಿರಿಶ್ವರ ಪ್ರಸಾಧಿಕ ಕಲಾ, ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ವಿಭಾಗದ ಮತ್ತು ವಿದ್ಯಾರ್ಥಿವೃಂದ ವತಿಯಿಂದ ಈಚೆಗೆ ಜರುಗಿದ ಸಿರಿ ಸಾಂಸ್ಕೃತಿಕ ಸಂಭ್ರಮದಲ್ಲಿ ಅವರು ಮಾತನಾಡಿದರು.
ಜನಪದ ಸಾಹಿತ್ಯವೆಂದರೆ ನಮ್ಮ ಜನರ ಜೀವನ, ಸಂಸ್ಕೃತಿ, ಪರಂಪರೆ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುವ ಅಮೂಲ್ಯ ಸಂಪತ್ತು. ಜನಪದ ಹಾಡುಗಳು, ಕಥೆಗಳು, ಗಾದೆಗಳು, ಒಗಟುಗಳು, ಹಬ್ಬ-ಹರಿದಿನಗಳ ಸಂಪ್ರದಾಯಗಳು ಇತ್ಯಾದಿ. ಈ ಎಲ್ಲ ರೂಪಗಳು ನಮ್ಮ ಗ್ರಾಮೀಣ ಬದುಕಿನ ಚಿತ್ರಣ ಕೊಡುತ್ತವೆ. ಜನಪದ ಹಾಡುಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಜನಪದ ಕಥೆಗಳು ನಮ್ಮಲ್ಲಿ ನೀತಿ, ಧೈರ್ಯ ಮತ್ತು ಸತ್ಯದ ಮೌಲ್ಯಗಳನ್ನು ಬೆಳೆಸುತ್ತವೆ ಎಂದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಬಿ.ಪಾಟೀಲ ಮಾತನಾಡಿ, ಸಿರಿ ಸಾಂಸ್ಕೃತಿಕ ಹಬ್ಬದಲ್ಲಿ ವಿಭಿನ್ನ ಭಾಷೆ, ಹಲವು ಆಚಾರ, ವಿಚಾರಗಳ ನಡುವೆ ನಮ್ಮ ಸಂಸ್ಕೃತಿ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ವಿದ್ಯಾರ್ಥಿಗಳಲ್ಲಿ ಕಲೆ, ಪ್ರತಿಭೆ ಇದೆ. ಅದನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಗಾದೆಗಳು ನಮ್ಮ ಅನುಭವದ ಸಾರವನ್ನು ಚಿಕ್ಕ ಪದಗಳಲ್ಲಿ ಹೇಳುವ ಅದ್ಭುತ ರೂಪವಾಗಿದೆ. ಇಂದು ಆಧುನಿಕ ಯುಗದಲ್ಲಿ, ತಂತ್ರಜ್ಞಾನ ಬೆಳವಣಿಗೆಯಿಂದ ಜನಪದ ಸಾಹಿತ್ಯ ಸ್ವಲ್ಪ ಮರೆತು ಹೋಗುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.
ವಿಡಿಯೋಗ್ರಾಫಿ, ರಂಗೋಲಿ, ಭಾಷಣ ಸ್ಪರ್ಧೆ, ನೃತ್ಯ, ಅಗ್ನಿ ರಹಿತ ಅಡುಗೆ, ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವೀತಿಯ, ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.ʼ
ಕೆಎಲ್‌ಇ ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಸಂತೋಷ ಹುದ್ದಾರ. ಐ.ಕ್ಯೂ.ಎಸ್.ಸಿ ಸಂಯೋಜಕಿ ಸುನಂದಾ ಸೊರಗಾಂವಿ, ಸಾಂಸ್ಕೃತಿಕ ವಿಭಾಗ ಸಂಯೋಜಕ ಎಸ್.ಎ ಪಾಟೀಲ, ಐ.ಸಿ. ಶಿರೋಳ, ಪೂಜಾ ಮನಗಾಂವಿ ಇತರರು ಇದ್ದರು.