ಮಹಾಲಿಂಗಪುರ ಪಟ್ಟಣದಲ್ಲಿ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಸಿದ್ದು ಸವದಿ, ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ ಇದ್ದರು.
- ಸಂಸದ ಗೋವಿಂದ ಕಾರಜೋಳ ಹೇಳಿಕೆ
- ಇಂದು ಮಹಾಲಿಂಗಪುರದಲ್ಲಿ ಪ್ರತಿಭಟನೆ
- ಟಾಟಾ ಪವರ್ ಬೇಕು ಎನ್ನುವವರು ಜೂ. 20ರ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ವಿದ್ಯುತ್ ಕಟ್ ಮಾಡಲಾಗುತ್ತದೆ.
ಮಹಾಲಿಂಗಪುರ: ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸಿ ರಾಜ್ಯ ಸರ್ಕಾರ ರೈತರಿಗೆ, ವಿದ್ಯುತ್ ಗ್ರಾಹಕರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಚಿತ್ರದುರ್ಗ ಸಂಸದ, ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 19 ಜಿಲ್ಲೆಗಳಲ್ಲಿ ಟಾಟಾ ಪವರ್ ಬೇಕು ಎನ್ನುವವರು ಜೂ. 20ರ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ವಿದ್ಯುತ್ ಕಟ್ ಮಾಡಲಾಗುತ್ತದೆ. ಟಾಟಾ ಪವರ್ ಕಂಪನಿಗೆ ವಿದ್ಯುತ್ ಪೂರೈಕೆ ಜವಾಬ್ದಾರಿ ವಹಿಸಲಾಗಿದೆ. ಇದು ಸರ್ಕಾರ ಜನರಿಗೆ ಮಾಡುತ್ತಿರುವ ಮಹಾ ದ್ರೋಹ ಎಂದು ತಿಳಿಸಿದರು.
ಖಾಸಗೀಕರಣದಿಂದಾಗಿ ಲಗಾಮು ಇಲ್ಲದ ಕುದುರೆಯಂತೆ ವಿದ್ಯುತ್ ದರ ಹೆಚ್ಚಾಗಲಿದ್ದು, ಇದು ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಹೊರೆಯಾಗಲಿದೆ. ಖಾಸಗಿ ಕಂಪನಿಗಳು ಯೂನಿಟ್‌ಗೆ 9 ರೂ. ವರೆಗೂ ದರ ವಿಧಿಸುವ ಸಾಧ್ಯತೆಯಿದ್ದು, ರೈತರು ನೀರಾವರಿ ಮತ್ತು ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಬಳಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಇಂತಹ ಪ್ರಯೋಗಗಳು ವಿಲವಾಗಿ ಟಾಟಾ ಕಂಪನಿಯರು ಬಿಟ್ಟು ಹೋದರು ಎಂದು ತಿಳಿಸಿದರು.
ಯಡಿಯೂರಪ್ಪ ಸರ್ಕಾರ ಇದ್ದಾಗ ರೈತರಿಗೆ ಮೀಟರ್ ಇರಲಿಲ್ಲ. 10 ಎಚ್‌ಪಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಇತ್ತು. ಟಿಸಿ ಸುಟ್ಟರೆ ಅಥವಾ ರಿಪೇರಿ ಇದ್ದರೆ 25 ಸಾವಿರ ರೂ. ಪಾವತಿಸಿಕೊಂಡು ಟಿಸಿ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರು ಹೊಸ ಪಂಪ್‌ಸೆಟ್ ಅಳವಡಿಸಿಕೊಳ್ಳಬೇಕಾದರೇ 2.5 ರಿಂದ 3 ಲಕ್ಷ ರೂ. ವರೆಗೆ ಕೊಟ್ಟು ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು. ಹೀಗಾಗಿ ರೈತರು ಗಾಬರಿ ಬಿದ್ದಿದ್ದಾರೆ. ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿದ್ಯುತ್ ಕಂಪನಿಗಳಲ್ಲಿ 77 ಸಾವಿರ ನೌಕರರಿದ್ದಾರೆ. ಅದರಲ್ಲಿ ಶೇ. 25 ರಷ್ಟು ನೌಕರರು ಎಸ್ಸಿ, ಎಸ್ಟಿ ಇದ್ದಾರೆ. ಖಾಸಗಿ ಕಂಪನಿ ಟಾಟಾ ಪವರ್‌ದಲ್ಲಿ ಮೀಸಲಾತಿ ಇರುವುದಿಲ್ಲ. ಅವರು ಇದ್ದ ನೌಕರರನ್ನು ತೆಗೆದು ಕಡಿಮೆ ಸಂಬಳಕ್ಕೆ ಎಂದು ಬೇರೆಯವರನ್ನು ತೆಗೆದುಕೊಳ್ಳಬಹುದು. ಇಲಾಖೆಯಲ್ಲಿ ಈಗ ಇದ್ದವರು ನಿರುದ್ಯೋಗಿಗಳಾಗುತ್ತಾರೆ. ರಾಜ್ಯದ 19 ಜಿಲ್ಲೆಗಳಲ್ಲಿ ಜಾರಿ ಮಾಡಿರುವ ಈ ಪ್ರಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಘಟಾನುಘಟಿಗಳ ಜಿಲ್ಲೆಯಲ್ಲಿ ಇದು ಜಾರಿಗೊಂಡಿಲ್ಲ ಎಂದು ಕಿಡಿಕಾರಿದರು.
ವಿದ್ಯುತ್ ಖಾಸಗೀಕರಣ ಖಂಡಿಸಿ ಜೂ. 17ರಂದು ಬಿಜೆಪಿ ಪಕ್ಷ ರೈತ ಸಂಘ ಮತ್ತು ರೈತರು ಎಲ್ಲರೂ ಸೇರಿ ಶಾಸಕ ಸಿದ್ದು ಸವದಿ ಅವರ ನೇತೃತ್ವದಲ್ಲಿ ಮಹಾಲಿಂಗಪುರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಮಹಾಲಿಂಗಪುರದಿಂದಲೇ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದರು.
ಶಾಸಕ ಸಿದ್ದು ಸವದಿ, ಎಪಿಎಂಸಿ ಮಾಜಿ ಅಧ್ಯಕ್ಷ ಧರೆಪ್ಪ ಸಾಂಗಲಿಕರ, ಮುಖಂಡರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಎಂ.ಐ. ಕೋಳಿಗುಡ್ಡ, ಮನೋಹರ ಶಿರೋಳ, ಅನಂತ ಘೋರ್ಪಡೆ, ಶಿವನಗೌಡ ಪಾಟೀಲ, ರಾಜು ಯಡಹಳ್ಳಿ, ಶಂಕರಗೌಡ ಪಾಟೀಲ, ಜಿ.ಎಸ್. ಗೊಂಬಿ, ಶೇಖರ ಅಂಗಡಿ, ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಶಿವಲಿಂಗ ಘಂಟಿ ಇದ್ದರು.