ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು. ರಾಮಪ್ಪ ಕರ್ಜಗಿ, ಅಪ್ಪಸಿ ಸೂರ್ಯವಂಶಿ, ಸಿದರಾಯ ಸನಸಿದ್ದ, ಎಂ.ಎನ್. ಒಡೆಯರ, ಬಸು ಕಡ್ಲಿ, ಬಸಪ್ಪ ಕರ್ಜಗಿ, ರಾಜ ಭಜಂತ್ರಿ, ಸದಾನಂದ ಹೊನವಾಡ, ಭೀಮಪ್ಪ ಜಾನೋಜಿ, ಜ್ಯೋತಿಬಾ ಚವಾಣ್ ಮತ್ತಿತರರಿದ್ದರು. 
ಬಾಗಲಕೋಟೆ

ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಆರಂಭಿಸಿ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕಲಕಿ ಕ್ರಾಸ್‌ನಲ್ಲಿ ನೂರಾರು ರೈತರಿಂದ ಉಪವಾಸ ಸತ್ಯಾಗ್ರಹ
  • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ
ಜಮಖಂಡಿ: ತಾಲೂಕಿನ ಬಹು ನಿರೀಕ್ಷಿತ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರು ಚಿಕ್ಕಲಕಿ ಕ್ರಾಸ್‌ನಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ತೊದಲಬಾಗಿ, ಚಿಕ್ಕಲಕಿ ಹಾಗೂ ಜನವಾಡ ಗ್ರಾಮಗಳ ನೂರಾರು ರೈತರು ಭಾಗವಹಿಸಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು. ಸುಮಾರು 12 ವರ್ಷಗಳಿಂದ ಯೋಜನೆ ಸ್ಥಗಿತಗೊಂಡಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ರೈತರು ಆರೋಪಿಸಿದರು.
ಕೆಇಬಿ 33 ಕೆವಿ ಸ್ಟೇಷನ್ ಕಾಮಗಾರಿ ಪ್ರಾರಂಭವಾಗಿಲ್ಲ, ಟೆಂಡರ್ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆ ಇಲ್ಲ.
ಕೆಂಗಲಗುತ್ತಿಯಿಂದ ದೇವರಗೆಣ್ಣೂರವರೆಗೆ ವಿದ್ಯುತ್ ಕಂಬ ಅಳವಡಿಕೆ, ಜಮಖಂಡಿ- ವಿಜಯಪುರ ರಾಜ್ಯ ಹೆದ್ದಾರಿ ದಾಟುವ ಕಾಲುವೆ ನಿರ್ಮಾಣ, ಜನವಾಡ ಗ್ರಾಮದ ಸರ್ವೇ ನಂ. 58ರಲ್ಲಿ ಪೈಪ್‌ಲೈನ್ ಅಳವಡಿಕೆ ಹಾಗೂ ಪಂಪ್ ಸೆಟ್ ಜೋಡಣೆ ಸೇರಿ ಪ್ರಮುಖ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಚಿವ ಎಂ.ಬಿ. ಪಾಟೀಲ ಅವರ ಸೂಚನೆಯಿದ್ದರೂ ಸ್ಥಳದಲ್ಲಿ ಯಾವುದೇ ಪ್ರಗತಿ ಕಾಣಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಹಣಕಾಸಿನ ಕೊರತೆ ಇಲ್ಲದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯವೇ ವಿಳಂಬಕ್ಕೆ ಕಾರಣ ಎಂದು ಆರೋಪಿಸಿದರು.
ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಮಪ್ಪ ಕರ್ಜಗಿ, ಅಪ್ಪಸಿ ಸೂರ್ಯವಂಶಿ, ಸಿದರಾಯ ಸನಸಿದ್ದ, ಎಂ.ಎನ್. ಒಡೆಯರ, ಬಸು ಕಡ್ಲಿ, ಬಸಪ್ಪ ಕರ್ಜಗಿ, ರಾಜ ಭಜಂತ್ರಿ, ಸದಾನಂದ ಹೊನವಾಡ, ಭೀಮಪ್ಪ ಜಾನೋಜಿ, ಜ್ಯೋತಿಬಾ ಚವಾಣ್ ಇತರರು ಉಪಸ್ಥಿತರಿದ್ದರು.