ಇಳಕಲ್ಲ ನಗರದಲ್ಲಿ ಪೈಗಂಬರ್ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. 
ಬಾಗಲಕೋಟೆ

ಇಳಕಲ್ಲನಲ್ಲಿ ಈದ್ ಮಿಲಾದ್ ಅದ್ದೂರಿ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಪೈಗಂಬರ್ ಜನ್ಮ ದಿನಾಚರಣೆ
  • ಸೌಹಾರ್ದತೆಯ ಸಂದೇಶ

ಇಳಕಲ್ಲ:

ನಗರದಲ್ಲಿ ಪೈಗಂಬರ್ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಬುಧವಾರ ಈದ್ ಮಿಲಾದ್ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಧಾರ್ಮಿಕ ಶ್ರದ್ಧೆ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶ ಸಾರಿತು.

ಮದೀನ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಕೊಪ್ಪರದ ಪೇಟೆ, ಬನ್ನಿಕಟ್ಟಿ, ಮಹಾಂತೇಶ ಚಿತ್ರಮಂದಿರ, ನಗರಸಭೆ, ಕಂಠಿ ಸರ್ಕಲ್, ಬಜಾರ್ ಬಸವನಗುಡಿ, ಗಾಂಧಿ ಚೌಕ್, ಕಿಲ್ಲಾ ಗಲ್ಲಿ ಸೇರಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಬಳಿಕ ಹಜರತ್ ಸೈಯದ್ ಶಾಹ ಮುರ್ತುಜಾ ಖಾದ್ರಿ ದರ್ಗಾ ತಲುಪಿ ಸಮಾಪ್ತಿಯಾಯಿತು.
ಮೆರವಣಿಗೆ ಮಹಾಂತೇಶ ಚಿತ್ರಮಂದಿರದ ಬಳಿ ಸಾಗುತ್ತಿದ್ದಾಗ ಯೂನಿಯನ್ ಸಾಂಸ್ಕೃತಿಕ ಸಂಘ ಹಾಗೂ ದೀಪು ದೀಕ್ಷಾ ಸಂಸ್ಥೆಯ ಪದಾಽಕಾರಿಗಳು ಮುಸ್ಲಿಂ ಮುಖಂಡರಿಗೆ ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಮುಖಂಡರು ಹಿಂದೂ ಬಾಂಧವರಿಗೆ ಹಸಿರು ಶಾಲು ಹೊದಿಸಿ ಪರಸ್ಪರ ಸೌಹಾರ್ದತೆ ಮೆರೆದರು.
ವಿವಿಧೆಡೆ ತಂಪು ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಉಸ್ಮಾನಗಣಿ ಹುಮ್ನಾಬಾದ್, ಅಬ್ದುಲ್ ರಜಾಕ್ ತಟಗಾರ, ಬಾವುದ್ದೀನ್ ಖಾಜಿ, ಮೋದ್ದಿನ್‌ಭಾಷಾ ಹುಣಚಗಿ, ನಿಸಾರ್ ಬೇಪಾರಿ, ಅಬ್ಬು ಹಳ್ಳಿ, ಶಬ್ಬೀರ್ ಬಾಗವಾನ, ಯುನೂಸ್ ಮುದಗಲ್ಲ, ಜಿಲಾನಿ ಚೋಪದಾರ ಸೇರಿ ಸಮಾಜದ ಮುಖಂಡರು ಮೆರವಣಿಗೆಯ ನೇತೃತ್ವ ವಹಿಸಿದ್ದರು.