ತೇರದಾಳ ಪಟ್ಟಣದ ನೂತನ ಸರ್ಕಾರಿ ಪ್ರೌಢ ಶಾಲೆ ಶಾಸಕ ಸಿದ್ದು ಸವದಿ ಉದ್ಘಾಟಿಸಿದ್ದರು. ಹಿರೇಮಠದ ಗಂಗಾಧರ ದೇವರು, ಶಿಲ್ಪಾ ಗೌತಮ ರೋಡಕರ, ನಸರೀನ್‌ಬಾನು ರಾಜೇಸಾಬ ನಗಾರ್ಜಿ, ಮಲ್ಲಪ್ಪಣ್ಣ ಜಮಖಂಡಿ, ಅಪ್ಪು ಮಂಗಸೂಳಿ ಇದ್ದರು.
- ಶಾಸಕ ಸಿದ್ದು ಸವದಿ ಭರವಸೆ
- ಉನ್ನತೀಕರಿಸಿದ ಪ್ರೌಢ ಶಾಲೆ ಉದ್ಘಾಟನೆ
- ಸರ್ಕಾರಿ ಪ್ರೌಢಶಾಲೆ ಪ್ರಾರಂಭ
ತೇರದಾಳ: ಜನತೆಯ ಬಹುದಿನದ ಬೇಡಿಕೆಯಾದ ಸರ್ಕಾರಿ ಪ್ರೌಢಶಾಲೆ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಅಂಚೆ ಕಚೇರಿ ಎದುರಿಗಿನ ಸರ್ಕಾರಿ ಶಾಲೆಗಳ ಸಂಕೀರ್ಣದಲ್ಲಿ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿ, ಇಲ್ಲಿ ಸರ್ಕಾರಿ ಪಿಯು ಕಾಲೇಜಿನ ಮಂಜೂರಾತಿಗೂ ಎಲ್ಲರೂ ಸೇರಿ ಪ್ರಯತ್ನಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರ ಶೈಕ್ಷಣಿಕ ಬದುಕಿಗೆ ಅನುಕೂಲವಾಗಿಸಲು ಪ್ರಯತ್ನಿಸೋಣ ಎಂದರು.
ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಮಾತನಾಡಿ, ನೂತನ ಪ್ರೌಢಶಾಲೆಗೆ ಮಕ್ಕಳ ದಾಖಲೆ ಹೆಚ್ಚಿಸುವ ಕಾರ್ಯಕ್ಕೆ ಇಲಾಖೆ ಜೊತೆಗೆ ಹಿರಿಯರು ಕೈಜೋಡಿಸಬೇಕು ಎಂದು ತಿಳಿಸಿದರು.
ಹಿರೇಮಠದ ಗಂಗಾಧರ ದೇವರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಉಪಾಧ್ಯಕ್ಷೆ ನಸರೀನ್‌ಬಾನು ರಾಜೇಸಾಬ ನಗಾರ್ಜಿ, ಮುಖಂಡರಾದ ಮಲ್ಲಪ್ಪಣ್ಣ ಜಮಖಂಡಿ, ಅಪ್ಪು ಮಂಗಸೂಳಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಿ.ಎಸ್. ಕಲ್ಯಾಣಿ, ಶಿಕ್ಷಣ ಸಂಯೋಜಕ ಸಂಗಮೇಶ ವಿಜಯಪುರ, ಬಿ.ಎಂ. ಹಳೆಮನಿ ಇದ್ದರು. ಬಿ.ಟಿ. ಪತ್ತಾರ ಕಾರ್ಯಕ್ರಮ ನಿರೂಪಿಸಿದರು.