ಬಾಗಲಕೋಟೆ ವಿದ್ಯಾ ಪ್ರಸಾರಕ ಮಂಡಳದ ನೂತನ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ನೆರವೇರಿಸಿದರು. ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಗಿರೀಶ ಮಸೂರಕರ ಮತ್ತಿತರರು ಚಿತ್ರದಲ್ಲಿದ್ದಾರೆ.
- ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಶಂಸೆ
- ನೂತನ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ
- ವಿದ್ಯಾಪ್ರಸಾರಕ ಮಂಡಳದ ಶಾಲಾ, ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ.
ಬಾಗಲಕೋಟೆ: ನಗರದ ವಿದ್ಯಾಪ್ರಸಾರಕ ಮಂಡಳವೂ ಅನ್ನದಾನ, ವಿದ್ಯಾದಾನ ಶ್ರೇಷ್ಟವೆಂದು ಭಾವಿಸಿ ಇಂದಿಗೂ ತನ್ನ ಸೇವಾ ಮನೋಭಾವನೆ ಮುಂದುವರಿಸಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಶಂಸಿಸಿದರು.
ನವನಗರದ ಸೆಕ್ಟರ್ 110ರಲ್ಲಿ ಡಾ. ಎಚ್.ಎಂ. ಶಿರೂರ ಆವರಣದಲ್ಲಿ ಬುಧವಾರ ವಿದ್ಯಾಪ್ರಸಾರಕ ಮಂಡಳದ ಶಾಲಾ ಕಟ್ಟಡಕ್ಕೆ ತಮ್ಮ ತಂದೆ-ತಾಯಿ ಸ್ಮರಣಾರ್ಥ ದೇಣಿಗೆ ನೀಡಿ, ಕಟ್ಟಡ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾಪ್ರಸಾರಕ ಮಂಡಳದ ಶಾಲಾ, ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ. ಹಿಂದೆ ತಾವು ಸಹ ಸಕ್ರಿ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದನ್ನು ಮೆಲಕು ಹಾಕಿದ ಅವರು, ವಿದ್ಯಾರ್ಥಿಗಳ ಶುಲ್ಕ ಹೆಚ್ಚಿಸಿ ಕಟ್ಟಡದ ಹೊರೆಯನ್ನು ಪಾಲಕರ ಮೇಲೆ ಹಾಕಬಹುದಿತ್ತು. ಆದರೆ, ಈ ಸಂಸ್ಥೆ ಅದನ್ನು ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಸಂಸ್ಥೆಯ ಹಳೇ ಕ್ಯಾಂಪಸ್ ಇದ್ದು, ಮುಳುಗಡೆಯಿಂದಾಗಿ ಅಲ್ಲಿ ಅಭಿವೃದ್ಧಿಗೆ ಅವಕಾಶವಿಲ್ಲ. ಹೀಗಾಗಿ ನವನಗರದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಸೂಕ್ತ ಎಂದರು.
ಪ್ರಾಚಾರ್ಯ ಡಾ. ಶ್ರೀನಿವಾಸ ನರಗುಂದ ಮಾತನಾಡಿ, ವಿದ್ಯಾ ಪ್ರಸಾರಕ ಮಂಡಳ ತನ್ನ 90ರ ಸಂಭ್ರಮದಲ್ಲಿದೆ. ಅರವಿಂದ ಲಿಂಬಾವಳಿ ಅವರು ಈ ಸಂಸ್ಥೆಯ ಹಳೇ ವಿದ್ಯಾರ್ಥಿ. ತಮ್ಮ ಪಾಲಕರ ಹೆಸರಿನಲ್ಲಿ 50 ಲಕ್ಷ ರೂ. ಗಳ ದೇಣಿಗೆಯನ್ನು ಚೆಕ್ ಮುಖಾಂತರ ನೀಡಿದ್ದಾರೆ ಎಂದು ತಿಳಿಸಿದರು.
ಡಾ. ಗಿರೀಶ ಮಸೂರಕರ ಮಾತನಾಡಿ, ಅರವಿಂದ ಲಿಂಬಾವಳಿ ಅವರು ತಾವು ಕಲಿತ ಶಾಲೆಗೆ ಕೊಡುಗೆ ನೀಡಬೇಕೆಂದು ಬಯಸಿ, ನೆರವಾಗುತ್ತಿರುವುದು ಖುಷಿಯ ವಿಷಯ ಎಂದು ಹೇಳಿದರು.
ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ, ಸಂಸ್ಥೆಯ ಅಧ್ಯಕ್ಷ ವಾಮನ್ ರಾವ್ ಕವಟೇಕರ್, ಉದ್ಯಮಿ ಹಿತೇಶ ಪಟೇಲ್ ಮತ್ತಿತರರು ವೇದಿಕೆಯಲ್ಲಿದ್ದರು.
ಶಿಕ್ಷಣ ತಜ್ಞೆ ಡಾ. ಮೀನಾ ಚಂದಾವರ್ಕರ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಸಂಸ್ಥೆ ಸದಸ್ಯರಾದ ಎಸ್.ಕೆ. ಕುಲಕರ್ಣಿ, ಪ್ರದೀಪ ಜೋಶಿ ಡಾ. ಸಂದೀಪ ಹುಯಿಲಗೋಳ, ಡಾ. ಆರ್.ವಿ. ಜೋಶಿ, ಡಾ. ಜಯತೀರ್ಥ ದೇಶಪಾಂಡೆ, ಪ್ರದೀಪ ಪರ್ವತಿಕರ, ಸಾಗರ ದೇಶಪಾಂಡೆ, ಬಾಬು ಜಂಬಗಿ, ರಂಗನಾಥ ಗುಮಾಸ್ತೆ, ಸಂತೋಷ ಗದ್ದನಕೇರಿ, ವಿನಾಯಕ ತಾಳಿಕೋಟಿ, ಗಿರೀಶ ಆಶ್ರಿತ, ಆನಂದ ಕಲ್ಮಡಿ ಮತ್ತಿತರರಿದ್ದರು.