ಮುಧೋಳ ನಗರದಮಲ್ಲಮ್ಮನಗರ ಪಿಎಂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಮಲ್ಲಿಕಾರ್ಜುನ ಅಂಬಿಗೇರ್, ಎಸ್.ಎಂ.ಮುಲ್ಲಾ, ಹನುಮಂತ ಅರಿಕೇರಿ, ಬಿಆರ್‌ಸಿಒ ಎ.ಆರ್. ಛಬ್ಬಿ, ಪ್ರಕಾಶ್ ಹೊಸಮನಿ ಇತರರಿದ್ದರು.
- ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಹೇಳಿಕೆ
- ಬಣ್ಣದ ಲೋಕದಲ್ಲಿ ಮಿಂದೆದ್ದ ನವಚೇತನರು
- ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ
ಮುಧೋಳ: ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಶಾಲಾ ಹಂತದಲ್ಲೇ ಉತ್ತಮ ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣ ಅವಶ್ಯ ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಹೇಳಿದರು.
ನಗರದ ಮಲ್ಲಮ್ಮನಗರದ ಪಿಎಂ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಳಚೆ ಪ್ರದೇಶದ ಮಕ್ಕಳ ಪಾಲಿನ ಈ ವಿದ್ಯಾ ದೇಗುಲ, ಹಬ್ಬದ ವಾತಾವರಣದೊಂದಿಗೆ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ಕೋರಿದ್ದು ಸಂತಸ ತಂದಿದೆ. ಶಿಕ್ಷಣವೇ ಸಮಾಜದ ಅಭಿವದ್ಧಿಯ ಮೂಲಾಧಾರ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಗೋಪಾಲ ಖಾಸೆ ಹಾಗೂ ಯುವ ಧುರೀಣ ಹನುಮಂತ ತಿಮ್ಮಾಪೂರ ಜಂಟಿಯಾಗಿ ಮಾತನಾಡಿ, ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಆರ್. ಬಾಲರಾಜ್ ಎಲ್ಲರಿಗೂ ಕತಜ್ಞತೆ ಸಲ್ಲಿಸಿದರು.
ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ, ಅಕ್ಷರ ದಾಸೋಹ ಅಧಿಕಾರಿ ಹನುಮಂತ ಅರಿಕೇರಿ, ಬಿಆರ್‌ಸಿಒ ಎ.ಆರ್. ಛಬ್ಬಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ಹೊಸಮನಿ, ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎನ್.ಜಿ. ಗುರಾಡಿ, ಸಿಆರ್‌ಪಿ ಸತೀಶ್ ಕವಳಿ, ರಮೇಶ ಅರಕೇರಿ, ಎಸ್‌ಡಿಎಂಸಿ ಅಧ್ಯಕ್ಷ ರಜಾಕ ಚಿಕ್ಕಲಗಾರ, ಸದಸ್ಯ ಮಾರುತಿ ಜಾಧವ ಸೇರಿ ಎಸ್‌ಡಿಎಂಸಿ ಸದಸ್ಯರು ಇದ್ದರು.
ಕಲಿಕಾ ಲೋಕದ ಅನಾವರಣ
ವಿಶೇಷ ಆಕರ್ಷಣೆಯಾಗಿ ಶಾಲಾ ಆವರಣದಲ್ಲಿ ವಿಜ್ಞಾನ, ಗಣಿತ ಹಾಗೂ ಸಜನಶೀಲತೆಗೆ ಸಂಬಂಧಿಸಿದ ಕಲಿಕಾ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ನೂತನ ಶೈಕ್ಷಣಿಕ ಸಾಲಿಗೆ ಚಾಲನೆ ನೀಡುತ್ತಾ ದಾಖಲಾತಿ ಆಂದೋಲನಕ್ಕೂ ವೇಗ ನೀಡಲಾಯಿತು. ಮಕ್ಕಳಿಗೆ ಪುಸ್ತಕ, ಬಟ್ಟೆ ವಿತರಣೆ ನಡೆಯಿತು. ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಸಿಹಿ ಭೋಜನ ಬಡಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿತು.