ಮುಧೋಳದ ಉತ್ತೂರ ಗ್ರಾಮದಲ್ಲಿ ನಡೆದ ಭಂಡಾರ ಜಾತ್ರೆ ಅಂಗವಾಗಿ ಅಜಾತ ನಾಗಲಿಂಗ ನಾಟಕ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮವನ್ನು ಶಾಂತವೀರಯ್ಯ ಮಹಾಸ್ವಾಮಿಗಳು, ಶೇಖರಯ್ಯ ಸ್ವಾಮಿಗಳು, ಶಂಕರ ತಿಮ್ಮಾಪೂರ ನೆರವೇರಿಸಿದರು. ಅಜಿತಗೌಡ ಪಾಟೀಲ್, ಡಾ.ವೆಂಕಟೇಶ ಗುಡೆಪ್ಪನವರ ಇತರರಿದ್ದರು.
- ಮುಖಂಡ ಶಂಕರ ತಿಮ್ಮಾಪೂರ ಹೇಳಿಕೆ
- ಅಜಾತ ನಾಗಲಿಂಗ ನಾಟಕ ಪ್ರದರ್ಶನಕ್ಕೆ ಚಾಲನೆ
ಮುಧೋಳ: ಆಧುನಿಕ ತಂತ್ರಜ್ಞಾನದ ಪರಿಣಾಮದಿಂದ ಮರೆಯಾಗುತ್ತಿರುವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಜಾತ್ರೆಗಳು ಹಾಗೂ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮುಖಂಡ ಶಂಕರ ತಿಮ್ಮಾಪೂರ ಹೇಳಿದರು.
ತಾಲೂಕಿನ ಉತ್ತೂರ ಗ್ರಾಮದ ಬಸವೇಶ್ವರ ಮಹಾರಥೋತ್ಸವ, ಮಾರುತೇಶ್ವರ ಓಕುಳಿ ಹಾಗೂ ಗ್ರಾಮದೇವತೆಯ ಭಂಡಾರ ಜಾತ್ರೆ ನಿಮಿತ್ತ ಗದಗದ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ಅಜಾತ ನಾಗಲಿಂಗ ನಾಟಕ ಪ್ರದರ್ಶನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ನಾಟಕಗಳು ಸಮಾಜದಲ್ಲಿ ಮೌಲ್ಯಗಳು ಹಾಗೂ ಪ್ರಜ್ಞೆ ಮೂಡಿಸುವಲ್ಲಿ ಸಹಾಯಕವಾಗುತ್ತವೆ. ಸಚಿವ ಆರ್.ಬಿ. ತಿಮ್ಮಾಪೂರ ಅವರ ನೇತೃತ್ವದಲ್ಲಿ ಉತ್ತೂರು ಗ್ರಾಮವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಕೆಪಿಎಸ್ ಶಾಲೆ, ಪದವಿಪೂರ್ವ ಕಾಲೇಜ್ ಹಾಗೂ ಬಸಯಜ್ಜನವರ ನೂತನ ಕಟ್ಟಡ ನಿರ್ಮಾಣದಂತಹ ಜನಪರ ಕಾರ್ಯಗಳು ಸ್ಮರಣೀಯವಾಗಿವೆ. ಏಳು ದಿನಗಳ ಕಾಲ ನಡೆಯುವ ಈ ವೈಭವದ ಜಾತ್ರ‍್ಯೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಯುವ ಮುಖಂಡ ಅಜಿತಗೌಡ ಪಾಟೀಲ್ ಮಾತನಾಡಿ, ಮೊಬೈಲ್ ಹಾವಳಿಯ ನಡುವೆಯೂ ನಾಟಕ ಕಲೆಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತವೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದರು.
ಡಾ.ವೆಂಕಟೇಶ ಗುಡೆಪ್ಪನವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ವಿವಿಧ ರಂಗದ ಸಾಧಕರನ್ನು ಸನ್ಮಾನಿಸಲಾಯಿತು. ಪಿಡಿಒ ಹನುಮಂತ ಭಜಂತ್ರಿ, ಮಾರುತಿ ಶಿಂಗಾಡಿ, ಮಲ್ಲು ಗಾಣಗಿ, ರಾಮಜಿ ಘಾಟಗೆ, ಜಯಸಿಂಗ್ ಬೋಸ್ಲೆ, ವಿಠ್ಠಲ್ ಇಮ್ಮಡಿ, ಬಸು ಬಡಿಗೇರ್, ಕಾಳಪ್ಪ ಬಡಿಗೇರ್, ದೀಪುಗೌಡ ಪಾಟೀಲ್, ರಾಚಪ್ಪ ಮಳಲಿ, ಧೋಂಡಿಬಾ ಘಾಟಗೆ, ದರೆಪ್ಪ ಗಾಣಗಿ, ಸುಭಾಷ್ ಬಂಡಿವಡ್ಡರ ಹಾಗೂ ಮಂಜುನಾಥ ನಿಂಬಾಳಕರ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಸದಾಶಿವ ಕಗಲಗೊಂಬ ಸ್ವಾಗತಿಸಿದರು. ಉಮೇಶ ಅಂಬಿ ನಿರೂಪಿಸಿದರು. ಗೋಪಾಲ ಮಳಲಿ ವಂದಿಸಿದರು.