ಬಾಗಲಕೋಟೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಪೋಸ್ಟರ್ ಬಿಡುಗಡೆಗೊಳಿಸಿದರು. ಡಿಸಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಯುಕೆಪಿ ಮಹಾವ್ಯವಸ್ಥಾಪಕ ಗಜಾನನ ಬಾಲೆ ಇತರರಿದ್ದಾರೆ.
- ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ-2026
- ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು
- ಉದ್ಯೋಗ ಮೇಳದ ಪ್ರಚಾರ ಪೋಸ್ಟರ್‌ಗಳನ್ನು ಬಿಡುಗಡೆ
ಬಾಗಲಕೋಟೆ: ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಾ.17ರಂದು ಬೆಳಗ್ಗೆ 9 ರಿಂದ ಸಂಜೆ 5 ವರೆಗೆ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ-2026 ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಉದ್ಯೋಗ ಮೇಳದ ಪ್ರಚಾರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಡಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಮೇಳದಲ್ಲಿ ವಿವಿಧ ಕ್ಷೇತ್ರದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಮೇಳದಲ್ಲಿ ಉತ್ಪಾದನಾ ವಲಯ, ಬ್ಯಾಂಕಿಂಗ್ ಕ್ಷೇತ್ರ, ಮಾರಾಟ, ಮಾಹಿತಿ ತಂತ್ರಜ್ಞಾನ, ಗಾರ್ಮೆಂಟ್ಸ್, ಸೇವಾ ಹಾಗೂ ಪ್ರವಾಸೋದ್ಯಮ, ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರ ಸೇರಿ ಹಲವಾರು ವಿಭಾಗಗಳಲ್ಲಿ ಉದ್ಯೋಗ ಅವಕಾಶಗಳಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ನೂರಾರು ಅವಕಾಶಗಳು ಸೇರಿ ವಿವಿಧ ವಿದ್ಯಾರ್ಹತೆಗಳಿಗೆ ಉದ್ಯೋಗ ಅವಕಾಶವಿರುತ್ತದೆ ಎಂದರು.
ಕೋಟೆನಾಡಿನ ಯುವಜನತೆಗೆ ಉದ್ಯೋಗ ಅವಕಾಶ ಸಿಗುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಹತೆಯ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯಬಹುದು. ಆಸಕ್ತರು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ, ಯುಕೆಪಿ ಮಹಾವ್ಯವಸ್ಥಾಪಕ ಗಜಾನನ ಬಾಲೆ, ಜಿಲ್ಲಾ ಕೌಶಲಾಧಿಕಾರಿ ಹಿರೇಮಠ, ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಇತರರಿದ್ದರು.