- ಜೆಸ್ಕಾಂ ಎಂಡಿ ಆಗಿ ಶಶಿಧರ ಕುರೇರ
- ಡಿಸಿಸಿ ಬ್ಯಾಂಕ್ ಆಡಳಿತಾಧಿಕಾರಿ ಹೊಣೆಯೂ ಡಿಸಿಗೆ
- ನಾಲ್ಕು ಬಹುಗ್ರಾಮ ಕುಡಿವ ನೀರಿನ ಯೋಜನೆಗಳಲ್ಲಿ ಎರಡನ್ನೂ ಪೂರ್ಣಗೊಳಿಸಿ,
ಬಾಗಲಕೋಟೆ : ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಎರಡು ವರ್ಷ ಹತ್ತು ತಿಂಗಳು ಸೇವೆ ಸಲ್ಲಿಸಿದ್ದ ಶಶಿಧರ ಕುರೇರ ಅವರನ್ನು ವರ್ಗಾವಣೆ ಮಾಡಿ ಕಲಬುರಗಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಖಾಲಿ ಆಗಿರುವ ಬಾಗಲಕೋಟೆ ಜಿ.ಪಂ. ಸಿಇಒ ಸದ್ಯ ಸರ್ಕಾರ ಯಾರನ್ನೂ ನೇಮಕ ಮಾಡದೇ ಸದ್ಯ ಖಾಲಿ ಇರುವ ಹುದ್ದೆಗೆ ಪ್ರಭಾರಿಯಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಶಿಧರ ಕುರೇರ ಅವರು ಜಿಪಂ ಸಿಇಒ ಆಗಿ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದು, ಆಡಳಿತ ಯಂತ್ರಕ್ಕೆ ವೇಗ ತಂದಿದ್ದರು. ಮುಖ್ಯವಾಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕರ ವಸೂಲಿ ಅಭಿಯಾನಕ್ಕೆ ಚಾಲನೆ ನೀಡಿದ ಪರಿಣಾಮ ಶೇ. 100ರಷ್ಟು ಕರ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆಡಳಿತದ ವಿಚಾರದಲ್ಲಿ ತಮ್ಮ ಟೇಬಲ್‌ಗೆ ಬರುವ ಯಾವುದೇ ಫೈಲ್‌ಗಳನ್ನು ಪೆಂಡಿಂಗ್ ಇಡದೇ ಮೂರು ದಿನಗಳ ಒಳಗಾಗಿ ವಿಲೇವಾರಿ ಮಾಡುವ ಮೂಲಕ ಆಡಳಿತಕ್ಕೆ ಚುರುಕು ನೀಡಿದ್ದರು. ನಾಲ್ಕು ಬಹುಗ್ರಾಮ ಕುಡಿವ ನೀರಿನ ಯೋಜನೆಗಳಲ್ಲಿ ಎರಡನ್ನೂ ಪೂರ್ಣಗೊಳಿಸಿ, ಇನ್ನೆರೆಡು ತಿಂಗಳಲ್ಲಿ ಕಮಿಷನ್ ಆಗಲಿವೆ. ಉಳಿದೆರೆಡು ಮುಂದಿನ ವರ್ಷ ಪೂರ್ಣಗೊಳ್ಳಲಿವೆ.
ಇನ್ನು ಜಲಜೀವನ್ ಮಿಷನ್ ಅಡಿಯಲ್ಲಿ 24/7 ಕುಡಿವ ನೀರಿನ ಯೋಜನೆಗೆ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಜಿ.ಪಂ. ಅನುದಾನದಲ್ಲಿ ಪೂರ್ಣಗೊಳಿಸಿ, 22 ಗ್ರಾಮಗಳಲ್ಲಿ ನಿರಂತರ ಕುಡಿವ ನೀರು ಯೋಜನೆ ಆರಂಭ ಮಾಡಿದರು. ಇದರಿಂದ ಜನರಿಗೆ ನಿರಂತರ ನೀರು ಜೊತೆಗೆ ನೀರನ ಕರದರಲ್ಲೂ ಉಳಿತಾಯ ಆಗುತ್ತಿದೆ.
ಜಿಪಂ ಮತ್ತು ತಾಪಂಗಳಿಗೆ ಡಾಕ್ಯೂಮೆಂಟ್ ಅನುದಾನ ಮತ್ತು ಅನ್‌ಟೈಡ್ ಅನುದಾನ ಲ್ಯಾಪ್ಸ್ ಆಗದಂತೆ ಶೇ. 100ರಷ್ಟು ಬಳಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಜಿ.ಪಂ. ವತಿಯಿಂದ ಗ್ರಂಥಾಲಯ ಮತ್ತು ಆಸ್ಪತ್ರೆ ಆರಂಭಿಸಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದರು. ಶಶಿಧರ ಕುರೇರ ಅವರು ಸಿಇಒ ಆಗಿ ಕಾರ್ಯ ನಿರ್ವಹಿಸಿದ ಎರಡು ವರ್ಷ ಹತ್ತು ತಿಂಗಳು ಅವಧಿಯಲ್ಲಿ ಜಿಪಂಗೆ ಜನಪ್ರತಿನಿಧಿಗಳು ಇರಲಿಲ್ಲ. ಸದ್ಯ ಖಾಲಿ ಆಗಿರುವ ಜಿಪಂ ಸಿಇಒ ಹುದ್ದೆ ಖಾಲಿ ಇದ್ದು, ಪ್ರಭಾರಿಯಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಡಿಸಿಸಿ ಬ್ಯಾಂಕ್‌ಗೂ ಸಂಗಪ್ಪ ಆಡಳಿತಾಧಿಕಾರಿ
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಅಧಿಕಾರ ಅವಧಿ ಮುಕ್ತಾಯವಾದ ಬಳಿಕ, ಚುನಾವಣೆ ನಡೆದಿಲ್ಲ. ಹೀಗಾಗಿ ಜಿ.ಪಂ. ಸಿಇಒ ಅವರನ್ನೇ ತಾತ್ಕಾಲಿಕವಾಗಿ ಬ್ಯಾಂಕ್‌ನ ಆಡಳಿತಾಧಿಕಾರಿಯಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಕಳೆದ ಆರು ತಿಂಗಳಿಂದ ಜಿ.ಪಂ. ಸಿಇಒ ಆಗಿದ್ದ ಶಶಿಧರ ಕುರೇರ ಅವರೇ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಅವರು ವರ್ಗಾವಣೆ ಆಗಿದ್ದು, ಆ ಹುದ್ದೆಯ ಪ್ರಭಾರ ವಹಿಸಿರುವ ಜಿಲ್ಲಾಧಿಕಾರಿ ಸಂಗಪ್ಪ ಅವರೆ ಡಿಸಿಸಿ ಬ್ಯಾಂಕ್‌ನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈಗಾಗಲೇ ಬಾಗಲಕೋಟೆ ನಗರಸಭೆಗೂ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಅಲ್ಲಿಯೂ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಆಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಆಡಳಿತದ ಹೊರೆ ಹೆಚ್ಚಾಗಲಿದೆ. ಇದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರ ಕೂಡಲೇ ಜಿ.ಪಂ.ಗೆ ಖಾಯಂ ಸಿಇಒ ಹುದ್ದೆಗೆ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಬೇಕಿದೆ.
"
ಬಾಗಲಕೋಟೆ ಜಿ.ಪಂ. ಸಿಇಒ ಆಗಿ ಸಲ್ಲಿಸಿರುವ ಸೇವೆ ಬಗ್ಗೆ ತೃಪ್ತಿ ಇದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಮ್ಮ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉತ್ತಮ ಸಹಕಾರ ನೀಡಿದರು.
-ಶಶಿಧರ ಕುರೇರ, ಜಿಪಂ ನಿರ್ಗಮಿತ ಸಿಇಒ, ಬಾಗಲಕೋಟೆ