ರಬಕವಿ/ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತ ದುಂಡಪ್ಪ ಕಾಂತಿಯವರ ತೋಟಕ್ಕೆ ಬಾಗಲಕೋಟೆ ತೋಟಗಾರಿಕೆ ವಿವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಲಿಂಬೆ ತೋಟದಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು. ಡಾ. ಬಸವರಾಜ ಪಡಶೆಟ್ಟಿ, ಡಾ. ಜಮೀಲ್ ಭಾಗವಹಿಸಿದ್ದರು. 
ಬಾಗಲಕೋಟೆ

ಕೃಷಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತಿಳಿವಳಿಕೆ ಅವಶ್ಯ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನಿ ಡಾ. ಬಸವರಾಜ ಪಡಶೆಟ್ಟಿ ಅನಿಸಿಕೆ
  • ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ
ರಬಕವಿ/ಬನಹಟ್ಟಿ: ತಂತ್ರಜ್ಞಾನ ಯುಗದಲ್ಲಿ ಅನಾದಿ ಕಾಲದ ಕೃಷಿ ಪದ್ಧತಿಗಳಿಂದ ಹೊರ ಬಂದು ಕಡಿಮೆ ಭೂಮಿ ಮತ್ತು ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಪಡೆಯುವ ತೋಟಗಾರಿಕೆ ಬೆಳೆಗಳಿಗೆ ಯುವ ವಿಜ್ಞಾನಿಗಳಿಂದ ವೈಜ್ಞಾನಿಕ ಸ್ಪರ್ಶದ ಅವಶ್ಯವಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಬಸವರಾಜ ಪಡಶೆಟ್ಟಿ ತಿಳಿಸಿದರು.
ತಾಲೂಕಿನ ನಾವಲಗಿ ಗ್ರಾಮದ ರೈತ ದುಂಡಪ್ಪ ಕಾಂತಿ ಅವರ ತೋಟಕ್ಕೆ ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಭೇಟಿ ನೀಡಿ ಅವರಿಗೆ ಪ್ರಾತ್ಯಕ್ಷಿಕೆ ತಿಳುವಳಿಕೆ ನೀಡಿ ಅವರು ಮಾತನಾಡಿದರು.
ರೈತರು ತಮ್ಮ ತೋಟದಲ್ಲಿ ಬಾಲಾಜಿ ಲಿಂಬೆ ತಳಿಯನ್ನು ಬೆಳೆಯುತ್ತಿದ್ದು, ಅದರಲ್ಲಿ ಲಘು ಪೋಷಕಾಂಶಗಳು ಮಿಶ್ರಿತಗೊಂಡ ಸಿಟ್ರಸ್ ಸ್ಪೆಷಲ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಲಾಯಿತು.
ತೋಟಗಾರಿಕಾ ಹಣ್ಣು ಬೆಳೆ ವಿಭಾಗದ ವಿಜ್ಞಾನಿಗಳಾದ ಡಾ. ಜಮೀಲ್ ಅವರ ಮಾರ್ಗದರ್ಶನದಲ್ಲಿ ಸಿಟ್ರಸ್ ಸ್ಪೆಷಲ್ ಬಳಕೆಯ ಪ್ರಾತ್ಯಕ್ಷಿಕೆ ತಿಳಿಸಿ, ಲಿಂಬೆ ಗಿಡಗಳಿಂದ ದಿರ್ಘ ಕಾಲದ ನಂತರ ಇಳುವರಿ ಪಡೆಯುವುದಕ್ಕಿಂತ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಮತ್ತು ಲಾಭದಾಯಕ ಕೃಷಿ ಕುರಿತು ರೈತರಿಗೆ ಸಲಹೆ ನೀಡಲಾಯಿತು.
ನಿಂಬೆ ಬೆಳೆಗೆ ಅಗತ್ಯವಿರುವ ಲಘು ಪೋಷಕಾಂಶಗಳ ಸರಿಯಾದ ಬಳಕೆ ಹಾಗೂ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ರೈತರಿಗೆ ತೋರಿಸಿಕೊಟ್ಟರು. ರೈತರು ದೈನಂದಿನ ಬದುಕಿಗೆ ಬಳಸುವ ಆಹಾರ ಧಾನ್ಯಗಳ ಸುರಕ್ಷಿತ ಸಂಗ್ರಹಣೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.