ಮುಧೋಳದ ಬಸವೇಶ್ವರ ವೃತ್ತದಲ್ಲಿ ಪ್ರವಾದಿ ನಿಂದನೆ ಖಂಡಿಸಿ ನಾಜಿಯಾ ಇಲಾಹಿ ಖಾನ್ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು. ಜಮೀರ್ ಬೇಗ್ ಜಮಾದಾರ, ಬಿಲಾಲ್ ಬಾಣದಾರ್, ರಾಜಭಕ್ಷ ಜಮಾದಾರ, ಇಸ್ಮಾಯಿಲ್ ವಾಲಿಕಾರ ಇತರರಿದ್ದರು. 
ಬಾಗಲಕೋಟೆ

ನಾಜಿಯಾ ಇಲಾಹಿ ಖಾನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಮುಧೋಳದಲ್ಲಿ ತೀವ್ರ ಪ್ರತಿಭಟನೆ
  • ಪ್ರವಾದಿ ನಿಂದನೆ
  • ಪ್ರವಾದಿ ಮಹಮ್ಮದ ಪೈಗಂಬರ್ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ.
ಮುಧೋಳ : ಪ್ರವಾದಿ ಮಹಮ್ಮದ ಪೈಗಂಬರ್ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಪಶ್ಚಿಮ ಬಂಗಾಳದ ನಾಜಿಯಾ ಇಲಾಹಿ ಖಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿದವು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಾಜಿಯಾ ಇಲಾಹಿ ಅವರ ವಿಡಿಯೋ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ದೇಶದ ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆಕೆಯ ನಡೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಾಜಿಯಾ ಇಲಾಹಿ ಖಾನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಳಿಕ ಉಪ ತಹಸೀಲ್ದಾರ್ ಎಂ.ಕೆ. ಇಂಡಿಕಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಚಿಂತಕ ಹಾಗೂ ವಕೀಲ ಯಲ್ಲಪ್ಪ ಹೆಗಡೆ ಮಾತನಾಡಿ, ನಾಜಿಯಾ ಇಲಾಹಿ ದೇಶದ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವ ಭಾವನೆ ಕದಡಲು ಯತ್ನಿಸುತ್ತಿದ್ದಾರೆ. ಧರ್ಮದ ವಿಷಬೀಜ ಬಿತ್ತುವ ಇಂತಹ ಶಕ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮೌಲಾನಾ ಸಜ್ಜಾದ್ ಹುಸೇನ್ ಖಾಜಿ ಮಾತನಾಡಿ, ಪ್ರವಾದಿ ಕುಟುಂಬದ ವಿರುದ್ಧ ಅವಹೇಳನ ಮಾಡಿರುವುದು ಅಕ್ಷಮ್ಯ. ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಎಐಎಂಐಎಂ ತಾಲೂಕು ಅಧ್ಯಕ್ಷ ಜಮೀರ್ ಬೇಗ್ ಜಮಾದಾರ ವಹಿಸಿದ್ದರು. ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಬಿಲಾಲ್ ಬಾಣದಾರ್, ಎಸ್‌ಡಿಪಿಐ ಅಧ್ಯಕ್ಷ ರಾಜಭಕ್ಷ ಜಮಾದಾರ, ಇಸ್ಮಾಯಿಲ್ ವಾಲಿಕಾರ ಇತರರಿದ್ದರು.